- Advertisement -
- Advertisement -
ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ಸಂಬಂಧಿಸಿದಂತೆ ಕಾಲೇಜು ಶಿಕ್ಷಣ ಇಲಾಖೆ ಮಹತ್ವದ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ್ದು, ಪ್ರವಾಸದ ವೇಳೆ ಸೆಲ್ಫಿ, ರೀಲ್ಸ್ ಹಾಗೂ ವಿಡಿಯೋ ಚಿತ್ರೀಕರಣವನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ವಿದ್ಯಾರ್ಥಿಗಳ ಸುರಕ್ಷತೆಯ ಹಿತದೃಷ್ಟಿಯಿಂದ ಇಲಾಖೆ ಒಟ್ಟು 12 ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿದ್ದು, ನಿಯಮ ಉಲ್ಲಂಘಿಸಿದರೆ ಸಂಬಂಧಪಟ್ಟವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದಾಗಿ ಎಚ್ಚರಿಸಿದೆ.
ಮುಖ್ಯ ನಿಯಮಗಳು:
- ಪೂರ್ವಾನುಮತಿ ಕಡ್ಡಾಯ: ಇಲಾಖೆಯ ಅನುಮತಿ, ಪೋಷಕರ ಒಪ್ಪಿಗೆ ಪತ್ರ ಹಾಗೂ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು ಕಡ್ಡಾಯ.
- ಸೆಲ್ಫಿ, ರೀಲ್ಸ್ ಬ್ಯಾನ್: ಪ್ರವಾಸದ ಸಂದರ್ಭದಲ್ಲಿ ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ಅಥವಾ ರೀಲ್ಸ್ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
- ಅವಧಿ ಮತ್ತು ಸಿಬ್ಬಂದಿ: ಪ್ರವಾಸದ ಅವಧಿ ಪ್ರಯಾಣವೂ ಸೇರಿ ಗರಿಷ್ಠ 5 ದಿನಗಳನ್ನು ಮೀರುವಂತಿಲ್ಲ. ತಂಡದೊಂದಿಗೆ ಕನಿಷ್ಠ ಒಬ್ಬ ಖಾಯಂ ಉಪನ್ಯಾಸಕರು ಹಾಗೂ ಇಬ್ಬರು ಮಹಿಳಾ ಅಧ್ಯಾಪಕಿಯರು ಇರಲೇಬೇಕು. ಕೇವಲ ಅತಿಥಿ ಉಪನ್ಯಾಸಕರ ನೇತೃತ್ವದಲ್ಲಿ ಪ್ರವಾಸ ಕೈಗೊಳ್ಳುವಂತಿಲ್ಲ.
- ಮಳೆಗಾಲದಲ್ಲಿ ನಿಷೇಧ: ಮಳೆಗಾಲದಲ್ಲಿ ಪ್ರವಾಸಕ್ಕೆ ಅನುಮತಿಯಿಲ್ಲ. ನದಿ, ಸಮುದ್ರ, ಕಡಿದಾದ ಬೆಟ್ಟ ಪ್ರದೇಶಗಳಿಗೆ ತೆರಳುವ ಮುನ್ನ ಪೂರ್ವಭಾವಿ ಸುರಕ್ಷತಾ ಕ್ರಮ ವಹಿಸಬೇಕು.
ವಿದ್ಯಾರ್ಥಿನಿಯರ ಸುರಕ್ಷತೆ ಅಥವಾ ಯಾವುದೇ ಅಹಿತಕರ ಘಟನೆ ಸಂಭವಿಸಿದಲ್ಲಿ ಕಾಲೇಜಿನ ಪ್ರಾಂಶುಪಾಲರು ಹಾಗೂ ಸಂಬಂಧಪಟ್ಟ ವಿಭಾಗದ ಮುಖ್ಯಸ್ಥರೇ ನೇರ ಹೊಣೆಗಾರರಾಗಲಿದ್ದಾರೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
- Advertisement -


