ಬೆಂಗಳೂರು: ಹಿಂದೂ ಪರ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆ ಎನ್ ಐಎಗೆ ಒಪ್ಪಿಸುವಂತೆ ಆಗ್ರಹಿಸಿ ಮೇ 25 ರಂದು ಬಜ್ಪೆ ಛಲೋ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ವಿಧಾನಸೌಧದಲ್ಲಿ ಇಂದು ಹೇಳಿಕೆ ನೀಡಿರುವ ಕಿಶೋರ್ ಕುಮಾರ್, ರಾಜ್ಯ ಸರ್ಕಾರ ಮತಾಂಧ ಶಕ್ತಿಗಳಿಗೆ ಶಕ್ತಿ ನೀಡುವ ಕೆಲಸ ಮಾಡಿದ್ದು, ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಮೂವರು ಬುರ್ಖಾಧಾರಿ ಮಹಿಳೆಯರು ಆರೋಪಿಗಳಿಗೆ ಸಹಾಯ ಮಾಡಲು ಹೋಗಿದ್ದಾರೆ, ಈ ಹಿಂದೆ ಜಿಲ್ಲೆಯಲ್ಲಿ ನಡೆದಿದ್ದ ಸುಖಾನಂದ ಶೆಟ್ಟಿ, ಕ್ಯಾಂಡಲ್ ಸಂತು ಮತ್ತು ಪೊಳಲಿ ಅನಂತು ಹತ್ಯೆ ಪ್ರಕರಣದಲ್ಲಿದ್ದ ವ್ಯಕ್ತಿಗಳು ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ನೇರವಾಗಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಅಲ್ಲದೇ, ನಿಷೇಧಿತ ಸಂಘಟನೆಯ ಕಾರ್ಯಕರ್ತರು ಹತ್ಯೆ ಮಾಡಿರುವ ಕಾರಣ ರಾಜ್ಯ ಸರ್ಕಾರ ಮತ್ತು ಪೊಲೀಸ್ ವ್ಯವಸ್ಥೆಯಿಂದ ನಮಗೆ ನ್ಯಾಯ ಸಿಗಲು ಸಾಧ್ಯವಿಲ್ಲ ಎಂದು ಹೇಳಿರುವ ಕಿಶೋರ್ ಕುಮಾರ್ ಪುತ್ತೂರು,
ಹಾಗಾಗಿ ಎನ್ಐಎ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿ ಬಜ್ಪೆ ಚಲೋ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.ಬಜರಂಗದಳ, ವಿಶ್ವ ಹಿಂದೂ ಪರಿಷತ್ ಮತ್ತು ಹಿಂದೂ ಜಾಗರಣಾ ವೇದಿಕೆ ನೇತೃತ್ವದಲ್ಲಿ ಭಾನುವಾರ ಬಜ್ಪೆ ಛಲೋ ನಡೆಯಲಿದೆ ಎಂದೂ ಎಂಎಲ್ಸಿ ಕಿಶೋರ್ ಕುಮಾರ್ ಹೇಳಿದ್ದಾರೆ.


