
ಹೊಸದಿಲ್ಲಿ: ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಲ್ಲಿ ದೇಣಿಗೆ ದುರುಪಯೋಗದ ಆರೋಪಗಳು ಕೇಳಿ ಬರುತ್ತಿದ್ದು, ಈ ಕುರಿತು FIR ದಾಖಲಿಸಿ, ಸಿಬಿಐ ನೇತೃತ್ವದ ವಿಶೇಷ ತನಿಖಾ ತಂಡದಿಂದ (SIT) ಕಾಲಮಿತಿಯೊಳಗೆ ತನಿಖೆ ನಡೆಸುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ವಕೀಲರಾದ ಅಜಯ್ ಕುಮಾರ್ ರಾಯ್ ಮತ್ತು ದಿನೇಶ್ ಕುಮಾರ್ ಯಾದವ್ ಸಲ್ಲಿಸಿರುವ ಈ ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಗಣಿಸುವಂತೆ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಜೋಯ್ಮಲ್ಯ ಬಾಗ್ಚಿ ಅವರಿದ್ದ ಸುಪ್ರೀಂ ಕೋರ್ಟ್ ಪೀಠಕ್ಕೆ ಗುರುವಾರ ಮನವಿ ಮಾಡಲಾಯಿತು.
ಅರ್ಜಿಗೆ ಈಗಾಗಲೇ ಸಂಖ್ಯೆ ದೊರೆತಿದ್ದರೂ ವಿಚಾರಣೆಯ ದಿನಾಂಕ ನಿಗದಿಯಾಗಿಲ್ಲ ಎಂದು ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದಾಗ, ಅರ್ಜಿಯಲ್ಲಿ ಯಾವುದೇ ತಾಂತ್ರಿಕ ನ್ಯೂನತೆಗಳಿಲ್ಲದಿದ್ದರೆ ನೋಂದಣಿ ವಿಭಾಗವು ಅದನ್ನು ಪ್ರಕ್ರಿಯೆಗೊಳಿಸುತ್ತದೆ ಎಂದು ಪೀಠ ತಿಳಿಸಿತು. ಕೊನೆಗೆ ಅರ್ಜಿದಾರರ ವಿನಂತಿಯ ಮೇರೆಗೆ, ಮುಂಬರುವ ಸೋಮವಾರ (ಜೂನ್ 29) ಈ ವಿಷಯವನ್ನು ತನ್ನ ಮುಂದೆ ಉಲ್ಲೇಖಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.


