ಗುವಾಹಟಿ :ಬಿಹಾರ, ಪಶ್ಚಿಮ ಬಂಗಾಳ, ತ್ರಿಪುರ ಸೇರಿದಂತೆ ಹಲವಾರು ರಾಜ್ಯಗಳ ರಾಜ್ಯಪಾಲರಾಗಿ ಸೇವೆ ಸಲ್ಲಿಸಿರುವ ಹಿರಿಯ ರಾಜಕಾರಣಿ ದೇವಾನಂದ್ ಕೊನ್ವರ್ ಅವರು ಶನಿವಾರ ಬೆಳಿಗ್ಗೆ ನಿಧನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶನಿವಾರ ಮುಂಜಾನೆ 2.30 ರ ಸುಮಾರಿಗೆ ಗುವಾಹಟಿಯ ರುಕ್ಮಿನಿಗಾಂವ್ ಪ್ರದೇಶದಲ್ಲಿನ ತಮ್ಮ ಸ್ವಂತ ನಿವಾಸದಲ್ಲಿ ಕೊನೆಯುಸಿರೆಳೆದರು.
ಅವರು 2009 ರ ಡಿಸೆಂಬರ್ 14 ರಿಂದ 2010 ರ ಜನವರಿ 23 ರವರೆಗೆ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ, 2009 ರ ಜೂನ್ 29 ರಿಂದ ಮಾರ್ಚ್ 21, 2013 ರವರೆಗೆ ಬಿಹಾರ ರಾಜ್ಯಪಾಲರಾಗಿ ಮತ್ತು ತ್ರಿಪುರದ ರಾಜ್ಯಪಾಲರಾಗಿ ಮಾರ್ಚ್ 25, 2013 ರಿಂದ ಜೂನ್ 29, 2014 ರವರೆಗೆ ಸೇವೆ ಸಲ್ಲಿಸಿದ್ದರು.
ಕಾಂಗ್ರೇಸ್ ನಲ್ಲಿ ಸಕ್ರಿಯರಾಗಿದ್ದ ಇವರ 1991 ರಲ್ಲಿ ಹಿತೇಶ್ವರ ಸೈಕಿಯಾ ನೇತೃತ್ವದ ಅಸ್ಸಾಂ ಸರ್ಕಾರದಲ್ಲಿ ಮತ್ತು 2001 ರಲ್ಲಿ ತರುಣ್ ಗೊಗೊಯಿ ನೇತೃತ್ವದ ಸರ್ಕಾರದಲ್ಲಿ ಕ್ಯಾಬಿನೆಟ್ ಮಂತ್ರಿಯಾಗಿದ್ದರು.
ಹಿರಿಯ ರಾಜಕಾರಣಿಯ ನಿಧನದ ಬಗ್ಗೆ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ವಿಷಾದ ವ್ಯಕ್ತಪಡಿಸಿದರು.