ಕುಂದಾಪುರ: ಯುಎಇಯ ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಗೀಡಾಗಿದ್ದ ಹೊನ್ನನಕೇರಿ ನಿವಾಸಿ ಅಲ್ವಿನ್ ಪ್ರಕಾಶ್ ಕುಂದರ್ (50) ಅವರ ಪಾರ್ಥಿವ ಶರೀರ ಶುಕ್ರವಾರ ಹುಟ್ಟೂರಿಗೆ ಆಗಮಿಸಿದ್ದು, ಕುಂದಾಪುರದ ಸಿಎಸ್‌ಐ ಸಮುದಾಯದ ಸ್ಮಶಾನದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿತು.
ಶುಕ್ರವಾರ ಬೆಳಗಿನ ಜಾವ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೃತದೇಹವನ್ನು ಆಂಬುಲೆನ್ಸ್ ಮೂಲಕ ಹೊನ್ನನಕೇರಿಯ ಮನೆಗೆ ತರಲಾಯಿತು. ಸಿಎಸ್‌ಐ ಕೃಪಾ ಚರ್ಚ್‌ನ ಧರ್ಮಗುರು ರೆ. ಫಾ. ಇಮಾನ್ಯುವೆಲ್ ಜಯಕರ್ ಅವರು ಅಂತಿಮ ವಿಧಿಯ ಪ್ರಾರ್ಥನೆ ನೆರವೇರಿಸಿದರು. ಬಳಿಕ ಶಾಸ್ತ್ರಿ ಸರ್ಕಲ್ ಬಳಿ ಇರುವ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನಡೆಸಲಾಯಿತು.
ಅಂತಿಮ ದರ್ಶನಕ್ಕೆ ನೂರಾರು ಸಾರ್ವಜನಿಕರು ಹಾಗೂ ಗಣ್ಯರು ಆಗಮಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್, ಶಾಸಕ ಕಿರಣ್ ಕುಮಾರ್ ಕೊಡ್ಗಿ, ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ತ ಹಾಗೂ ಕುಟುಂಬಸ್ಥರು, ಸ್ನೇಹಿತರು ಅಂತಿಮ ನಮನ ಸಲ್ಲಿಸಿದರು.


