ಬೆಳ್ತಂಗಡಿ : ಕುವೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈಗಾಗಲೇ ವಾಣಿಜ್ಯ ಕಟ್ಟಡ/ವಾಸ್ತವ್ಯ ಕಟ್ಟಡಗಳನ್ನು ಅಧಿಕೃತ ಅನುಮತಿ ಪಡೆಯದೇ ಅಕ್ರಮವಾಗಿ ನಿರ್ಮಾಣವಾಗುತ್ತಿರುವುದು ವರದಿಯಾಗುತ್ತಿರುವ ಮಧ್ಯೆಯೇ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ 70 ಲಕ್ಷ ರೂ. ಗಳಷ್ಟು ಪರಿಹಾರ ಮೊತ್ತ ಪಡೆದ ಬಳಿಕವೂ ಕಟ್ಟಡವನ್ನು ಸ್ವಲ್ಪ ಮಾತ್ರ ಕೆಡವಿ ಅನಧಿಕೃತವಾಗಿ ಮರುನಿರ್ಮಾಣ ಮಾಡುತ್ತಿರುವ ಬಗ್ಗೆ ಕುವೆಟ್ಟು ಗ್ರಾ.ಪಂ ಪಿಡಿಒ ಸಕಾರಾತ್ಮಕವಾಗಿ ಸ್ಪಂದಿಸದೇ ಇರುವುದರಿಂದ ಇದೀಗ ಬೆಳ್ತಂಗಡಿ ತಾ.ಪಂ ಕಾರ್ಯನಿರ್ವಹಣಾಧಿಕಾರಿಗಳಿಗೆ ಫೆ.24 ರಂದು ದೂರು ನೀಡಲಾಗಿದೆ.

ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಲಾದಿಕೊಟ್ಟಿಗೆ – ವಿಧ್ಯಾನಗರ ಎಂಬಲ್ಲಿ ಅಕ್ರಮ ಕಟ್ಟಡ ನಿರ್ಮಾಣದ ಕಾಮಗಾರಿಯೊಂದು ಭರದಲ್ಲಿ ನಡೆಯುತ್ತಿದೆ. ಈ ಕಟ್ಟಡವನ್ನು ಈಗಾಗಲೇ ಹೆದ್ದಾರಿ ಇಲಾಖೆ ಭೂ ಸ್ವಾಧೀನಪಡಿಸಿಕೊಂಡು 70 ಲಕ್ಷ ರೂ ಪರಿಹಾರ ಮೊತ್ತ ನೀಡಿದರೂ ಕಟ್ಟಡದ ಪಾರ್ಶ್ವ ವನ್ನು ಮಾತ್ರ ತೆರವುಗೊಳಿಸಿದ ಮನೆಮಾಲಿಕರು ಇದೀಗ ಹೆದ್ದಾರಿಯ ಅಂಚಿನವರೆಗೂ ಅಕ್ರಮ ಕಟ್ಟಡ ನಿರ್ಮಾಣಮಾಡುತ್ತಿದ್ದಾರೆ ಎಂಬುದು ದೂರಿನಲ್ಲಿ ಉಲ್ಲೇಖಿಸಲಾಗಿರುವ ಅಂಶ. ಈ ಕಟ್ಟಡ ಮಾಲಿಕರಾದ ಪುತ್ತುಮೋನು ಬ್ಯಾರಿ ಮಗನಾದ ಜಿ.ಮಹಮ್ಮದ್ ಎಂಬುವವರು ಈಗಾಗಲೇ ತನ್ನ ಜಮೀನು ಇನ್ನಿತರ ವಿಷಯಗಳಲ್ಲಿ ಸ್ಥಳೀಯ ಎಲ್ಲರಿಂದಲೂ ನಿತ್ಯ ಜಗಳ ಕಾಯುತ್ತಾ ಸಾರ್ವಜನಿಕ ಶಾಂತಿ ಕದಡುತ್ತಿದ್ದಾರೆ ಎಂಬ ದೂರು ಕೂಡ ಇದ್ದು, ವಿವಾದಿತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.ಹೆದ್ದಾರಿ ಕಾಮಗಾರಿಯ ಪರಿಹಾರದ ಹಣವೂ ಇವರಿಗೆ ಈಗಾಗಲೇ ದೊರಕಿದೆ. ಪ್ರಸ್ತುತ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡೇ (ಒಂದು ಅಡಿ ಕೂಡಾ ಅಂತರವಿಡದೇ) ನೂತನ ಕಟ್ಟಡವೊಂದನ್ನು ಇವರು ನಿರ್ಮಿಸುತ್ತಿದ್ದಾರೆ.ಹೆದ್ದಾರಿ ರಸ್ತೆಗೆ ತಾಗಿಕೊಂಡೇ ಇರುವ ಹಾಗೂ ವಾಹನಗಳ ದಟ್ಟಣೆಯಿಂದಾಗಿ ಕಾಲು ದಾರಿಯಲ್ಲಿ ಜನರು ನಡೆದಾಡಲೂ ಕಷ್ಟವಾಗುತ್ತಿರುವ ಈ ಅಕ್ರಮ ಕಟ್ಟಡ ಕಾಮಗಾರಿಗೆ ಸ್ಥಳೀಯ ಕುವೆಟ್ಟು ಗ್ರಾಮ ಪಂಚಾಯತ್ ಅಧಿಕಾರಿಗಳು ದುರಸ್ತಿ ಮಾಡುವ ಬಗ್ಗೆ ಹೇಗೆ ಅನುಮತಿ ನೀಡಿದ್ದಾರೆ ? ಹಾಗೂ ರಾಷ್ಟ್ರೀಯ ಹೆದ್ದಾರಿಯ ಸಂಬಂಧಪಟ್ಟ ಅಧಿಕಾರಿಗಳು ಯಾಕೆ ಇದಕ್ಕೆ ತಡೆಯಾಜ್ಞೆ ನೀಡಲಿಲ್ಲ ಎಂಬುವುದು ಸಾರ್ವಜನಿಕ ವಲಯದಲ್ಲಿ ಚರ್ಚಿತ ವಿಷಯವಾಗಿದೆ.

ಈ ಬಗ್ಗೆ ಕುವೆಟ್ಟು ಪಿಡಿಒ ಇಮ್ತಿಯಾಜ್ ಅವರ ಬಳಿ ವಿಚಾರಿಸಿದಾಗ, ಮನೆ ದುರಸ್ತಿ ಎಂದು ಅನುಮತಿ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಆದರೆ ಅಲ್ಲಿ ನಡೆಯುತ್ತಿರುವುದು ಮಾತ್ರ ಹೊಸ ಪಿಲ್ಲರ್ ಹಾಕಿ ಒಳಗಿಂದೊಳಗೆ ಗೋಡೆ ಕೆಡವಿ ಹೊಸ ಕಟ್ಟಡ ನಿರ್ಮಿಸುತ್ತಿರುವುದು ಕಂಡು ಬರುತ್ತದೆ. ಈ ಅಕ್ರಮಗಳ ಹಿಂದೆ ಗ್ರಾಮ ಪಂಚಾಯತ್ ಅಧಿಕಾರಿಗಳು ಭಾಗಿಯಾಗಿರುವ ಸಾಧ್ಯತೆ ಹೆಚ್ಚಾಗಿದೆ.

ಚಾಕು ಹಿಡಿದು ಬೆದರಿಕೆ : ಅಕ್ಕಪಕ್ಕದ ನಿವಾಸಿಗಳ ಜೊತೆಗೆ ನಿತ್ಯ ಜಗಳ ಕಾಯುವ ಕಟ್ಟಡ ಮಾಲೀಕ ಮೊಹಮ್ಮದ್ ಎಂಬ ವ್ಯಕ್ತಿ ರವಿವಾರದಂದು ಸ್ಥಳೀಯ ರಲ್ಲಿ ಜಗಳ ಕಾದು ಕಲ್ಲು, ಚಾಕು ಹಿಡಿದುಕೊಂಡು ರೌಡಿಸಂ ಮಾಡಿಕೊಂಡು ಬೆದರಿಸುತ್ತಿರುವ ದೃಷ್ಯದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗಿದೆ. ಆದರೆ ಈ ಬಗ್ಗೆ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಪೊಲೀಸರು ವೀಡಿಯೋ ಆಧರಿಸಿ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಳ್ಳದಿದ್ದರೆ ಮುಂದೆ ಅಪಾಯ ಖಚಿತವಾಗಿದೆ.
ಅನಧಿಕೃತ ಬಾಡಿಗೆ ರೂಮುಗಳು; ಈ ಕಟ್ಟಡ ಮಾಲಿಕರ ಕಟ್ಟಡದಲ್ಲಿ ಪ್ರವಾಸೋದ್ಯಮ ಇಲಾಖೆ ಅಥವಾ ಇನ್ಯಾವುದೇ ಸಕ್ಷಮ ಪ್ರಾಧಿಕಾರದಿಂದ ಅಧಿಕೃತ ಲೈಸೆನ್ಸ್ ಪಡೆಯದೆ ಅಕ್ರಮ ಲಾಡ್ಜ್ ರೂಮ್ಸ್ ಗಳನ್ನು ಬಾಡಿಗೆಗೆ ಕೂಡ ನೀಡಲಾಗುತ್ತಿದೆ ಎಂಬ ಮಾಹಿತಿ ಕೂಡ ಇದೆ. ಈ ವ್ಯಕ್ತಿ ರಿಕ್ಷಾ ಚಾಲಕ ಕೂಡ ಆಗಿದ್ದು ಬೆಳಗ್ಗೆ ಬೆಂಗಳೂರು ಇತರ ಕಡೆಗಳಿಂದ ಬಸ್ಸಿನಲ್ಲಿ ಬರುವ ಪ್ರಯಾಣಿಕರನ್ನು ನಮ್ಮಲ್ಲಿ ರೂಮಿನ ವ್ಯವಸ್ಥೆ ಇದೆ ಎಂದು ಹೇಳಿ ಅಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂಬ ಮಾಹಿತಿಯೂ ಇದೆ. ಇಲಾಖೆಯ ಹಿರಿಯ ಅಧಿಕಾರಿಗಳು ತನಿಖೆ ನಡೆಸಿದ್ರೆ ಅಕ್ರಮದ ಒಳಗಿರುವ ಭ್ರಷ್ಟಾ ಅಧಿಕಾರಿಗಳು ಹೊರ ಬರಬರುತ್ತಾರೆ.


