
ಹೈದರಾಬಾದ್: ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಮತ್ತು ನಿರ್ದೇಶಕ ರಾಜ್ ನಿಡಿಮೋರು ದಂಪತಿಗೆ ಗಂಡು ಮಗುವಾಗಿದೆ. ನಟಿ ಸಮಂತಾ ಗಂಡು ಮಗುವಿಗೆ ಜನ್ಮ ನೀಡಿದ್ದು, ಶುಕ್ರವಾರ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಗುವಿನ ಮೊದಲ ಫೋಟೋ ಹಂಚಿಕೊಳ್ಳುವ ಮೂಲಕ ಈ ಸಿಹಿ ಸುದ್ದಿಯನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ.
ದಂಪತಿ ತಮ್ಮ ಮುದ್ದಾದ ಮಗುವಿಗೆ ‘ದೇವ್ ನಿಡಿಮೋರು’ ಎಂದು ಹೆಸರಿಟ್ಟಿದ್ದಾರೆ. ಫೋಟೋ ಜೊತೆಗೆ ಭಾವುಕ ಸಾಲುಗಳನ್ನು ಬರೆದುಕೊಂಡಿರುವ ಸಮಂತಾ, ‘‘ನಮ್ಮ ಹೃದಯಗಳು ಎಂದಿಗಿಂತಲೂ ಹೆಚ್ಚು ಸಂತೋಷದಿಂದ ತುಂಬಿವೆ’’ ಎಂದು ಸಂಭ್ರಮ ಹಂಚಿಕೊಂಡಿದ್ದಾರೆ.
ಗರ್ಭಿಣಿಯಾದಾಗಿನಿಂದಲೂ ಸಮಂತಾ ತಮ್ಮ ವಿಶೇಷ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದರು. ಗರ್ಭಾವಸ್ಥೆಯಲ್ಲೂ ಜಿಮ್ ಮತ್ತು ವರ್ಕೌಟ್ ಮಾಡುವ ಮೂಲಕ ಫಿಟ್‌ನೆಸ್ ಪ್ರಿಯರ ಗಮನ ಸೆಳೆದಿದ್ದರು. ಇತ್ತೀಚೆಗಷ್ಟೇ ತಾಯಿ-ಮಗುವಿನ ಆರೋಗ್ಯಕ್ಕಾಗಿ ನಡೆದ ಸಾಂಪ್ರದಾಯಿಕ ಪೂಜೆಯ ಚಿತ್ರಗಳನ್ನೂ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.
ಖ್ಯಾತ ನಿರ್ದೇಶಕ ಜೋಡಿ ‘ರಾಜ್ ಮತ್ತು ಡಿಕೆ’ ಖ್ಯಾತಿಯ ರಾಜ್ ನಿಡಿಮೋರು ಹಾಗೂ ಸಮಂತಾ 2025ರ ಡಿಸೆಂಬರ್‌ನಲ್ಲಿ ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ಸರಳವಾಗಿ ವಿವಾಹವಾಗಿದ್ದರು. ‘ದಿ ಫ್ಯಾಮಿಲಿ ಮ್ಯಾನ್ 2’, ‘ಸಿಟಾಡೆಲ್: ಹನಿ ಬನ್ನಿ’ ವೆಬ್ ಸರಣಿಗಳು ಹಾಗೂ ಇತ್ತೀಚಿನ ‘ಮಾ ಇಂಟಿ ಬಂಗಾರಂ’ ಚಿತ್ರದಲ್ಲೂ ಈ ಜೋಡಿ ಒಟ್ಟಿಗೆ ಕೆಲಸ ಮಾಡಿತ್ತು. ಇದೀಗ ಮೊದಲ ಮಗುವಿನ ಆಗಮನದಿಂದ ಎರಡೂ ಕುಟುಂಬಗಳಲ್ಲಿ ಸಂತಸ ಮನೆಮಾಡಿದ್ದು, ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳಿಂದ ನವದಂಪತಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.


