Friday, March 29, 2024
Homeಇತರಅಸ್ತಂಗತನಾದ "ರವಿ"ಯ ಅಂತರಾಳದ ಕುರಿತು- ಹೇಳಬೇಕಿದೆ ಒಂದಿಷ್ಟು!..

ಅಸ್ತಂಗತನಾದ “ರವಿ”ಯ ಅಂತರಾಳದ ಕುರಿತು- ಹೇಳಬೇಕಿದೆ ಒಂದಿಷ್ಟು!..

spot_img
- Advertisement -
- Advertisement -

ಕನ್ನಡ ಪತ್ರಿಕೋದ್ಯಮದಲ್ಲಿ ತನ್ನದೇ ಬರಹದ ಶೈಲಿ ಹೊಂದಿದ್ದ ರವಿ ಬೆಳಗೆರೆ ಓರ್ವ ಗಟ್ಟಿಹೃದಯದ ವ್ಯಕ್ತಿ. ಆತ ಹೃದಾಘಾತಕ್ಕೆ ವಿಧಿವಶರಾದರು ಎಂದು ಒಪ್ಪಿಕೊಳ್ಳೋದು ಕೊಂಚ ಕಷ್ಟ. ಬೆಳಗೆರೆ ಎಂಬ ಹೆಸರು ಕನ್ನಡ ಪತ್ರಿಕೋದ್ಯಮದಲ್ಲಿ ತನ್ನದೇ ಆದ ಮಜಲು ಸೃಷ್ಟಿಸಿ ಅಷ್ಟಕ್ಕೇ ಸುಮ್ಮನಾಗದೆ ಚಿಂತನೆಯ ಕಡೆಗೆ ಎಳೆದೊಯ್ದ ವ್ಯಕ್ತಿತ್ವ ಅದು. ತನ್ನ ಬರಹದ ಮೂಲಕ ಅಕ್ಷರಗಳಲ್ಲೇ ತಿವಿದು ಹೇಳಬಲ್ಲ ಘನತೆ ಅಕ್ಷರ ಮಾಂತ್ರಿಕನ ಬರಹಕ್ಕಿತ್ತು.

ಪ್ರತಿಯೊಬ್ಬ ಬರಹಗಾರನಿಗೂ ಆತನದೇ ನಿಲುವು ಮತ್ತು ನಡೆಗಳಿರುತ್ತವೆ. ರವಿ ಬೆಳಗೆರೆ ನಿಲುವು ಏನೇ ಇರಲಿ ಅದು ಒಗ್ಗಿತೋ? ಬಿಟ್ಟಿತೋ? ಎಂಬುದು ನಂತರದ ಮಾತು ಆದರೆ ಎಂತವರನ್ನೂ ತಿರುಗಿ ನೋಡುವಂತೆ ಮಾಡಬಲ್ಲ ಚೈತನ್ಯ ದಿಗ್ಗಜನ ಬರಹಕ್ಕಿತ್ತು. ಬರೆಯುವ ಮುನ್ನ ಓದದ ಹೊರತು ಬರಹ ರುಚಿಸುವುದಿಲ್ಲ ಈ ಕಾರಣಕ್ಕೆ ಬೆಳಗೆರೆ ಸಾಕಷ್ಟು ಓದುತ್ತಿದ್ದರು.

1958ರಲ್ಲಿ ಬಳ್ಳಾರಿಯಲ್ಲಿ ಹುಟ್ಟಿದ ರವಿ ಬೆಳಗೆರೆಗೆ ಅವಿರತ ಶ್ರಮದ ಬದುಕು ಬಹಳ ಇಷ್ಟವಾಗುತ್ತಿತ್ತು. ಮುಂದೆ ಅದೇ ಹೆಸರು ಮತ್ತು ಹಣಕ್ಕೆ ದಾರಿಯಾಯಿತು. ಆರಂಭದಲ್ಲಿ ಬಳ್ಳಾರಿಯಲ್ಲಿ ಇತಿಹಾಸ ಮೇಷ್ಟ್ರಾಗಿ ಕೆಲಸ ಮಾಡುತ್ತಿದ್ದ ಅವರು 1984ರಲ್ಲಿ ಬೆಂಗಳೂರಿಗೆ ಬಂದಾಗ ಬದುಕಿಗಾಗಿ ಪೇಪರ್ ಬಾಯ್ , ರೂಮ್ ಬಾಯ್ , ರೆಸೆಪ್ಟಿವ್ನಿಸ್ಟ್ , ಮಿಲ್ಕ್ ಸೆಲ್ಲರ್ , ಮೆಡಿಕಲ್ ರೆಪ್ ಎಲ್ಲತರದ ಕೆಲಸಗಳನ್ನು ಮಾಡುತ್ತಾರೆ. ಹಸಿವು ಮತ್ತು ಬೆಳೆಯುವ ಹಂಬಲ ಆತನಲ್ಲಿ ಸಾಕಷ್ಟಿತ್ತು.

ಮುಂದೆ ತನ್ನದೇ ಪ್ರಿಂಟಿಂಗ್ ಪ್ರೆಸ್ ತೆಗೆದು ಹಾಯ್ ಬೆಂಗಳೂರು ಪತ್ರಿಕೆಯ ಮೂಲಕ ಮನೆಮಾತಾದ ರವಿ ಹಿಂತಿರುಗಿ ನೋಡಲಿಲ್ಲ. ಹಲವಾರು ವರ್ಷ ಅತಿ ಹೆಚ್ಚು ಮಾರಾಟವಾದ ಪತ್ರಿಕೆ ಎನ್ನುವ ಹೆಗ್ಗಳಿಕೆ ಹಾಯ್ ಬೆಂಗಳೂರಿಗಿತ್ತು. ಟಿವಿ , ಸಿನಿಮಾ ಕ್ಷೇತ್ರಗಳಲ್ಲೂ ರವಿ ತಮ್ಮದೇ ಛಾಪೂ ಮೂಡಿಸಿದವರು ನಟನೆಯೂ ಅವರ ಕೈ ಹಿಡಿದಿತ್ತು. ರವಿ ಬೆಳಗೆರೆ, ಭಾವನಾ ಪ್ರಕಾಶನ, ಭಾವನಾ ಆಡಿಯೋ ರೀಚ್ ಮತ್ತು ಪ್ರಾರ್ಥನಾ ಶಾಲೆ ಯ ಸಂಸ್ಥಾಪಕ. ಇಲ್ಲಿನ ಕಾರ್ಯಚಟುವಟಿಕೆಗಳ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಅವರು ಹೊಂದಿದ್ದರು.

ತಮ್ಮ ವಸ್ತುನಿಷ್ಠ ಬರಹಗಾರಿಕೆಯಲ್ಲಿ ಅವನೊಬ್ಬನಿದ್ದ ಗೋಡ್ಸೆ,ಮೇಜರ್ ಸಂದೀಪ್ ಹತ್ಯೆ, ಅನಿಲ್ ಲಾಡ್ ಮತ್ತು ನಲವತ್ತು ಕಳ್ಳರು, ಮುಸ್ಲಿಂ,ಕಾರ್ಗಿಲ್‌ನಲ್ಲಿ ಹದಿನೇಳು ದಿನ, ಬ್ಲ್ಯಾಕ್ ಫ್ರೈಡೆ (ಅನುವಾದ) ರೇಷ್ಮೆ ರುಮಾಲು (ಅನುವಾದ) ಇಂದಿರೆಯ ಮಗ ಸಂಜಯ,ಗಾಂಧೀ ಹತ್ಯೆ ಮತ್ತು ಗೋಡ್ಸೆ, ಡಯಾನಾ,ಪಾಪದ ಹೂವು ಫೂಲನ್, ಸಂಜಯ,ಪಾಪಿಗಳ ಲೋಕದಲ್ಲಿ ,ಭೀಮಾ ತೀರದ ಹಂತಕರು ಹೀಗೆ ಹಲವು ಪುಸ್ತಕಗಳನ್ನು ರವಿ ಬೆಳೆಗೆರೆ ಬರೆದಿದ್ದಾರೆ.

ಬೆಳಗೆರೆ ಕೇವಲ ಬರಹಮಾತ್ರವಲ್ಲದೆ ತಮ್ಮ ಕಂಠದಿಂದಲೂ ಪರಿಚಿತರು ‘ಪ್ರತಿ ಅಂಧಕಾರಕ್ಕೂ ಒಂದು ಸೂರ್ಯೋದಯ ಇರುತ್ತೆ..’ ಎನ್ನುತ್ತಿದ್ದ ರವಿಯವರ ಮಾತನ್ನ ಪ್ರತಿ ಕನ್ನಡಿಗನು ಅವರ ದನಿಯಲ್ಲೇ ನೆನಪಿಸಿಕೊಳ್ಳಬಲ್ಲ. ಆತನ ಕಂಠಕ್ಕೂ ಆ ಶಕ್ತಿ ಇತ್ತು. ಬರಹ ದಲ್ಲಿ ಬದುಕು ಕಂಡುಕೊಂಡು ಓದಿನಲ್ಲೇ ನೆಮ್ಮದಿಕಂಡ ಜೀವ ಬರಹದ ವೇಳೆಯಲ್ಲೇ ಬದುಕು ಕೊನೆಯಾಗಿಸಿದ್ದು ವಿಶೇಷ.

ರವಿ ಬರೆದೆಲ್ಲಾ ಬರಹವನ್ನು ಒಪ್ಪಿಕೊಳ್ಳುತ್ತೇವೆ ಅಥವಾ ಅಳವಡಿಸಿಕೊಳ್ಳಬಹುದು ಎಂದಲ್ಲ ಅದು ಓದುಗನ ವಿವೇಚನೆಯ ಪ್ರಶ್ನೆ ಆದರೆ ಎಂತಹ ವಿಷಯವೇ ಆದರು ಓದುಗನನ್ನು ಚಿಂತನೆಗೆ ಹಚ್ಚುವ ಶಕ್ತಿ ಆ ಕೈಗಳಿಗಿತ್ತು. ಅದಕ್ಕೆ ಬೆಳಗೆರೆ ಸಾವು ಕಾಡುತ್ತದೆ.

ಸಾಕಷ್ಟು ಮಹತ್ವಾಕಾಂಕ್ಷೆಉಳ್ಳ ಮನುಷ್ಯ ಬೆಳಗೆರೆ ನೊಂದವರಲ್ಲಿ ಒಂದು ಹುರುಪು ಮೂಡಿಸಿ ಸ್ಫೂರ್ತಿ ನೀಡಲೆಂದೇ ಆಡಿಯೋ ಸಿಡಿಯಲ್ಲಿ ಹಲವು ಪ್ರೇರಣೆಯ ಮಾತುಗಳನ್ನ ಹರಿ ಬಿಡುತ್ತಿದ್ದು ಅದು ವೈರಲ್ ಆಗುತ್ತಿತ್ತು. ಬೆಳಗೆರೆ ಇಂದು ಬೆಳಿಗ್ಗೆ ಹೃದಾಘಾತದಿಂದ ನಿಧನರಾಗಿದ್ದಾರೆ.62 ನೇ ವಯಸ್ಸಿನಲ್ಲಿ ಬರಹದ ಯಾತ್ರೆ ಮುಗಿಸಿ ಬಾರದ ಲೋಕದೆಡೆಗೆ ನಡೆದಿದ್ದಾರೆ. ಆದರೆ ಬರೆದ ಪ್ರತಿ ಪುಸ್ತಕದೊಳಗೂ ಬೆಳೆಗರೆ ಸಾದಾ ಜೀವಂತ.ಓಂ ಶಾಂತಿ…

ಪೂಜಾ ಪ್ರಶಾಂತ್ ಶೆಟ್ಟಿ

- Advertisement -
spot_img

Latest News

error: Content is protected !!