ಬಂಟ್ವಾಳ: ಹಜ್ ಯಾತ್ರೆಗೆ ತೆರಳಲು ಕೂಡಿಟ್ಟ ಹಣದಿಂದ ಆಹಾರ ಸಾಮಗ್ರಿ ಖರೀದಿಸಿ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಬಡವರಿಗೆ ವಿತರಿಸಿದ ತಾಲೂಕಿನ ಗೂಡಿನಬಳಿ ನಿವಾಸಿ ಅಬ್ದುರ್ರಹ್ಮಾನ್ ಅವರ ಸಾಮಾಜಿಕ ಕಳಕಳಿಗೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.
ಅಬ್ದುಲ್ ರಹ್ಮಾನ್ ಅವರು ಸುಮಾರು 20 ವರ್ಷಗಳಿಂದ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದಾರೆ. ಕೂಲಿ ಮಾಡಿ ಸಂಪಾದಿಸಿದ ಹಣದಿಂದ ಪವಿತ್ರ ಮಕ್ಕಾ, ಮದೀನ ಯಾತ್ರೆ ಕೈಗೊಳ್ಳುವ ಉದ್ದೇಶದಿಂದ ಒಂದಿಷ್ಟು ಹಣವನ್ನು ಹಲವಾರು ವರ್ಷಗಳಿಂದ ಕೂಡಿಡುತ್ತಾ ಬಂದಿದ್ದಾರೆ. ಕೊರೋನ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದು ಕೆಲಸ ಕಾರ್ಯವಿಲ್ಲದೆ ಬಡ ಮತ್ತು ಮಧ್ಯಮ ವರ್ಗದ ಜನರು ಸಂಕಷ್ಟದಲ್ಲಿದ್ದಾರೆ.

ಲಾಕ್ ಡೌನ್ ನಿಂದ ಜನರು ಸಂಕಷ್ಟದಲ್ಲಿರುವುದು ಮನಗಂಡ ಅಬ್ದುರ್ರಹ್ಮಾನ್ ಅವರು ಹಜ್ ಯಾತ್ರೆಗೆಂದು ತಾನು ಹಲವು ವರ್ಷಗಳಿಂದ ಕೂಡಿಟ್ಟ ಹಣದಿಂದ ಆಹಾರ ಸಾಮಗ್ರಿ ಖರೀದಿಸಿ ವಿತರಿಸಿದ್ದಾರೆ.
ಲಾಕ್ ಡೌನ್ ನಿಂದ ಜನಸಾಮಾನ್ಯರು ಕಷ್ಟದಲ್ಲಿರುವ ಈ ಸಂದರ್ಭದಲ್ಲಿ ನಾನು ಹಜ್ ಯಾತ್ರೆಗೆಂದು ಕೂಡಿಟ್ಟ ಹಣವು ನಮಗೆ ಶಾಪ ಹಾಕದೇ ಇರಲಾರದು. ಈ ಹಣದಿಂದ ಹಜ್ ಯಾತ್ರೆ ಮಾಡುವುದಕ್ಕಿಂತ ಹಸಿವಿನಿಂದಿರುವವರ ಹೊಟ್ಟೆ ತುಂಬಿಸುವುದೇ ಪುಣ್ಯದ ಕೆಲಸ ಎನ್ನುತ್ತಾರೆ ಅಬ್ದುಲ್ ರಹ್ಮಾನ್.
ಪವಿತ್ರ ಯಾತ್ರೆಗೆ ಕೂಡಿಟ್ಟ ಅಲ್ವ ಸ್ವಲ್ಪ ಹಣದಿಂದ ಅಹಾರ ಸಾಮಾಗ್ರಿಗಳನ್ನು ಖರೀದಿಸಿ ಲಾಕ್ ಡೌನ್ ನಿಂದ ತೀವ್ರ ಸಂಕಷ್ಟಕ್ಕೆ ಒಳಗಾದ ಕುಟುಂಬಕ್ಕೆ ಸಹಾಯಹಸ್ತ ನೀಡುವ ಮೂಲಕ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ