ಮಂಗಳೂರು, ಏಪ್ರಿಲ್ 27: ಹಿರಿಯ ಕೆ.ಎ.ಎಸ್ ಅಧಿಕಾರಿ ಕೆ. ರಾಜು ಮೊಗವೀರ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾಗಿ (ಆಡಳಿತ) ಸೋಮವಾರ ಅಧಿಕಾರ ವಹಿಸಿಕೊಂಡರು.
ಈ ಸಂದರ್ಭದಲ್ಲಿ, ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಪಿ. ಎಲ್ ಧರ್ಮ, ಹಣಕಾಸು ಅಧಿಕಾರಿ ಬಿ. ನಾರಾಯಣ, ವಿಶೇಷಾಧಿಕಾರಿಗಳಾದ ಎಂ. ಜಯಶಂಕರ್, ಡಾ. ನಾಗಪ್ಪ ಗೌಡ, ಉಪ ಕುಲಸಚಿವ ಹುಕ್ರಪ್ಪ ನಾಯ್ಕ್, ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಪ್ರೊ. ನವೀನ್ ಕುಮಾರ್ ಎಸ್.ಕೆ ಮೊದಲಾದವರು ಉಪಸ್ಥಿತರಿದ್ದರು. ಕೊವಿಡ್-19 ನಂತರದ ಪರಿಸ್ಥಿತಿ ಎದುರಿಸಲು ಅಧಿಕಾರಿಗಳಿಗೆ ತಮ್ಮ ವಿಭಾಗದ ಕೆಲಸಗಳ ಆದ್ಯತಾ ಪಟ್ಟಿ ಮಾಡಿಕೊಡಲು ಸೂಚಿಸಿದರು. ಎಲ್ಲರ ಸಹಕಾರದೊಂದಿಗೆ ತಮ್ಮ ಆಸಕ್ತಿಯ ಮಳೆ ನೀರು ಕೊಯ್ಲು ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತರುವ ಇಚ್ಛೆ ವ್ಯಕ್ತಪಡಿಸಿದರು.
ಪರಿಚಯ:
ಮೂಲತಃ ಕುಂದಾಪುರದವರಾದ ಕೆ. ರಾಜು ಮೊಗವೀರ, ಭಂಡಾರ್ಕರ್ಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಬಿ. ಎ ಶಿಕ್ಷಣ ಪೂರೈಸಿದ್ದಾರೆ. ʼಡೆಕ್ಕನ್ ಹೆರಾಲ್ಡ್ʼ ಪತ್ರಿಕೆಯ ಜಾಹಿರಾತು ವಿಭಾಗದಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದ ಇವರು, ಕೆಎಎಸ್ ಪೂರೈಸಿದ ಬಳಿಕ ಮಂಗಳೂರು ಸೇರಿದಂತೆ ಹಲವೆಡೆ ತಹಶೀಲ್ದಾರರಾಗಿ ಸೇವೆ ಸಲ್ಲಿಸಿದರು. ಶಿರಸಿಯ ಉಪ ಆಯುಕ್ತರಾಗಿ, ಮಂಗಳೂರು ಮಹಾನಗರ ಪಾಲಿಕೆಯ ಉಪ ಆಯುಕ್ತರಾಗಿ (ಕಂದಾಯ) ಮತ್ತು ಸಮಗ್ರ ಶಿಕ್ಷಾ ಅಭಿಯಾನದ ಹೆಚ್ಚುವರಿ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ.