ಸಾಮೂಹಿಕ ಅತ್ಯಾಚಾರ ಮತ್ತು ವರ್ಷಗಳ ಕಾಲ ನಡೆದ ನಿರಂತರ ಬ್ಲ್ಯಾಕ್‌ಮೇಲ್‌ಗೆ ಬೇಸತ್ತು ಅಕ್ಕ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ, ಪೊಲೀಸರಿಂದ ನ್ಯಾಯ ಸಿಗದ ಕಾರಣಕ್ಕೆ ಮನನೊಂದ ತಂಗಿಯೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಭೀಕರ ಘಟನೆ ರಾಜಸ್ಥಾನದ ಜೋಧ್‌ಪುರ ಗ್ರಾಮೀಣ ಪ್ರದೇಶದಲ್ಲಿ ನಡೆದಿದೆ.
ಈ ಇಬ್ಬರು ಸಹೋದರಿಯರ ಸಾವು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ಮೂಡಿಸಿದ್ದು, ಸ್ಥಳೀಯವಾಗಿ ಭಾರಿ ಉದ್ವಿಗ್ನತೆ ಸೃಷ್ಟಿಸಿದೆ.
ಘಟನೆಯ ವಿವರ: ಸ್ಥಳೀಯ ಇ-ಮಿತ್ರ ಸೇವಾ ಕೇಂದ್ರದ ನಿರ್ವಾಹಕನಾಗಿದ್ದ ಮಹಿಪಾಲ್ ಎಂಬಾತ ಹಿರಿಯ ಸಹೋದರಿಯನ್ನು ಪ್ರೀತಿಯ ಹೆಸರಿನಲ್ಲಿ ನಂಬಿಸಿದ್ದ. ಆಕೆಯ ಅಶ್ಲೀಲ ಚಿತ್ರಗಳನ್ನು ಗುಟ್ಟಾಗಿ ರೆಕಾರ್ಡ್ ಮಾಡಿಕೊಂಡಿದ್ದ ಈತ, ಅದನ್ನು ತೋರಿಸಿ ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದ. ಮಹಿಪಾಲ್ ಮತ್ತು ಆತನ ಸಹಚರರಾದ ಶಿವರಾಜ್, ಗೋಪಾಲ್, ವಿಜರಾಮ್, ದಿನೇಶ್, ಮನೋಜ್ ಹಾಗೂ ಪುಖ್ರಾಜ್ ಸೇರಿದಂತೆ ಒಟ್ಟು ಎಂಟು ಜನ ಆರೋಪಿಗಳು ಕಳೆದ ನಾಲ್ಕು ವರ್ಷಗಳಿಂದ ಆಕೆಯ ಮೇಲೆ ಸತತವಾಗಿ ಸಾಮೂಹಿಕ ಅತ್ಯಾಚಾರ ಎಸಗಿ, ಪ್ರಾಣಬೆದರಿಕೆ ಒಡ್ಡುತ್ತಿದ್ದರು. ಈ ನರಕಯಾತನೆ ತಾಳಲಾರದೆ ಹಿರಿಯ ಸಹೋದರಿ ಕಳೆದ ಮಾರ್ಚ್ ತಿಂಗಳಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು.
ಇನ್ನು ಅಕ್ಕನ ಸಾವಿಗೆ ಕಾರಣರಾದ ಕಾಮುಕರಿಗೆ ಶಿಕ್ಷೆ ಕೊಡಿಸಲು ಕಿರಿಯ ಸಹೋದರಿ ಸತತವಾಗಿ ಹೋರಾಟ ನಡೆಸಿದ್ದಳು. ಎಂಟು ಜನರ ವಿರುದ್ಧ ಪೊಲೀಸರಿಗೆ ದೂರು ನೀಡಿ ಎಫ್‌ಐಆರ್ ದಾಖಲಿಸಿದ್ದರೂ, ಒಂದು ತಿಂಗಳಾದರೂ ಪೊಲೀಸರು ಯಾವುದೇ ನಿರ್ದಿಷ್ಟ ಕ್ರಮ ಕೈಗೊಂಡಿರಲಿಲ್ಲ. ಇದರ ನಡುವೆ, ಆರೋಪಿಗಳು ದೂರು ಹಿಂಪಡೆಯುವಂತೆ ಕಿರಿಯ ಸಹೋದರಿಯ ಮೇಲೂ ದೌರ್ಜನ್ಯ ಎಸಗಿ ಬೆದರಿಕೆ ಹಾಕಲು ಶುರು ಮಾಡಿದ್ದರು. ”ನನಗೆ ನ್ಯಾಯ ಸಿಗದಿದ್ದರೆ ನಾನು ಕೂಡ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದು ಆಕೆ ಪೊಲೀಸರಿಗೆ ಎಚ್ಚರಿಕೆ ನೀಡಿದ್ದರೂ ಸಹ ಇಲಾಖೆ ನಿರ್ಲಕ್ಷ್ಯ ವಹಿಸಿತ್ತು ಎಂದು ಆರೋಪಿಸಲಾಗಿದೆ.
ನೀರಿನ ಟ್ಯಾಂಕ್ ಹತ್ತಿ ಕಣ್ಣೀರಿಟ್ಟ ತಂಗಿ ಪೊಲೀಸರ ಉದಾಸೀನತೆ ಹಾಗೂ ಆರೋಪಿಗಳ ಕಾಟದಿಂದ ಬೇಸತ್ತ ಕಿರಿಯ ಸಹೋದರಿ, ಶುಕ್ರವಾರದಂದು ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿ ಸಾರ್ವಜನಿಕವಾಗಿ ನೀರಿನ ಟ್ಯಾಂಕ್ ಮೇಲೆ ಹತ್ತಿ ಪ್ರತಿಭಟನೆ ನಡೆಸಿದ್ದಾಳೆ. ತನ್ನ ಅಳಲನ್ನು ಕೇಳುವವರಿಲ್ಲದಿದ್ದಾಗ ತೀವ್ರ ಮನನೊಂದು ಅಲ್ಲಿಯೇ ವಿಷ ಸೇವಿಸಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಕೊನೆಯುಸಿರೆಳೆದಿದ್ದಾಳೆ ಎಂದು ವರದಿಯಾಗಿದೆ.


