ಕಾರವಾರ: ಮೀನುಗಾರಿಕೆ ವೇಳೆ ನೀರಿನಿಂದ ಹಾರಿ ಬಂದು ಮೀನೊಂದು ಹೊಟ್ಟೆಗೆ ಚುಚ್ಚಿದ ಪರಿಣಾಮ ಗಾಯಗೊಂಡ ಯುವಕ ಸಾವನ್ನಪ್ಪಿರುವ ಘಟನೆ ಕಾರವಾರದಲ್ಲಿ ನಡೆದಿದೆ. ಕಾರವಾರ ತಾಲೂಕಿನ ಮಾಜಾಳಿ ಗ್ರಾಮದ ದಾಂಡೇಭಾಗ ನಿವಾಸಿ ಅಕ್ಷಯ ಅನಿಲ ಮಾಜಾಳಿಕರ್(24) ಮೃತ ಯುವಕ.
ಅಕ್ಷಯ ಮಂಗಳವಾರ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದಾಗ ಈ ದುರಂತ ಸಂಭವಿಸಿದೆ. ಮೀನುಗಾರಿಕೆ ನಡೆಸುತ್ತಿದ್ದಾಗ ನೀರಿನಿಂದ ಸುಮಾರು 8 ರಿಂದ 10 ಇಂಚು ಉದ್ದದ ಮೀನೊಂದು ಅನಿರೀಕ್ಷಿತವಾಗಿ ದೋಣಿಯೊಳಗೆ ಹಾರಿ ಬಂದಿದೆ. ಈ ಮೀನು ನೇರವಾಗಿ ಅಕ್ಷಯನ ಹೊಟ್ಟೆಗೆ ಚುಚ್ಚಿದ್ದು, ಆತನಿಗೆ ಗಂಭೀರ ಗಾಯಗಳಾಗಿದ್ದವು. ಕೂಡಲೇ ಗಾಯಗೊಂಡ ಅಕ್ಷಯನನ್ನು ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆಸ್ಪತ್ರೆಯಲ್ಲಿ ಗಾಯದ ಭಾಗಕ್ಕೆ ಹೊಲಿಗೆ ಹಾಕಿ, ವೈದ್ಯರು ಡಿಸ್ಚಾರ್ಜ್ ಮಾಡಿದ್ದರು. ಆದರೆ, ನೋವು ಕಡಿಮೆ ಆಗದ ಕಾರಣ ಬುಧವಾರ ಅಕ್ಷಯ ಮರಳಿ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ, ಗುರುವಾರ ಬೆಳಗಿನ ಜಾವ ಸುಮಾರು 5 ಗಂಟೆ ಸುಮಾರಿಗೆ ಅಕ್ಷಯ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾನೆ. ಮೀನಿನ ಮೂತಿಯಿಂದ ಚುಚ್ಚಿದ ಪರಿಣಾಮ ಅಕ್ಷಯನ ಕರುಳಿಗೆ ಗಂಭೀರ ಗಾಯವಾಗಿರುವುದೇ ಸಾವಿಗೆ ಕಾರಣ ಎಂದು ಶಂಕಿಸಲಾಗಿದೆ.
ಯುವಕನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಮೀನುಗಾರರು ಮತ್ತು ಕುಟುಂಬ ಸದಸ್ಯರು ಕ್ರಿಮ್ಸ್ ಆಸ್ಪತ್ರೆ ಬಳಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. “ವೈದ್ಯರ ನಿರ್ಲಕ್ಷ್ಯದಿಂದಲೇ ಅಕ್ಷಯ ಸಾವನ್ನಪ್ಪಿದ್ದಾನೆ. ಕೇವಲ ಹೊಲಿಗೆ ಹಾಕಿ ಡಿಸ್ಚಾರ್ಜ್ ಮಾಡಿದ್ದರು. ಸಿಟಿ ಸ್ಕ್ಯಾನ್ ಮಾಡಿ ಮೀನಿನ ಮುಳ್ಳು ಕರುಳಿಗೆ ತಾಗಿದೆ ಎನ್ನುವುದನ್ನು ಪತ್ತೆ ಹಚ್ಚಿದ್ದರೆ ನನ್ನ ಮಗ ಬದುಕುತ್ತಿದ್ದ”. ಎಂದು ಮೃತ ಯುವಕನ ತಂದೆ ಅನಿಲ್ ಮಾಜಾಳಿಕರ್ ಅವರು ಆರೋಪಿಸಿದ್ದಾರೆ. ಸರಿಯಾದ ಚಿಕಿತ್ಸೆ ನೀಡದಿರುವುದಕ್ಕೆ ವೈದ್ಯರ ವಿರುದ್ಧ ಕಠಿಣ ಕ್ರಮಕ್ಕೆ ಅವರು ಆಗ್ರಹಿಸಿದ್ದಾರೆ.


