Thursday, July 9, 2026
Homeಉತ್ತರ ಕನ್ನಡಮಂಗಳೂರು ಪ್ರವಾಸಕ್ಕೆ ಹೊರಟಿದ್ದ ಯುವಕರ ತಂಡಕ್ಕೆ ಯಮಸ್ವರೂಪಿಯಾದ ಲಾರಿ; ಧಾರವಾಡದ ಆರು ‘ಸ್ವಿಗ್ಗಿ’ ಡೆಲಿವರಿ ಬಾಯ್ಸ್...

ಮಂಗಳೂರು ಪ್ರವಾಸಕ್ಕೆ ಹೊರಟಿದ್ದ ಯುವಕರ ತಂಡಕ್ಕೆ ಯಮಸ್ವರೂಪಿಯಾದ ಲಾರಿ; ಧಾರವಾಡದ ಆರು ‘ಸ್ವಿಗ್ಗಿ’ ಡೆಲಿವರಿ ಬಾಯ್ಸ್ ಸ್ಥಳದಲ್ಲೇ ದುರ್ಮರಣ!

- Advertisement -
- Advertisement -

ಕಾರವಾರ ; ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಘಾಟ್‌ನ ಬಳಗಾರ್ ಬಳಿ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಧಾರವಾಡ ಮೂಲದ ಆರು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಂಗಳೂರು ಹಾಗೂ ಧರ್ಮಸ್ಥಳ ಪ್ರವಾಸಕ್ಕೆ ಹೊರಟಿದ್ದ ತೂಫಾನ್ ವಾಹನ ಮತ್ತು ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯೇ ಈ ದುರಂತಕ್ಕೆ ಕಾರಣವಾಗಿದೆ. ಮೃತರೆಲ್ಲರೂ ಹುಬ್ಬಳ್ಳಿ-ಧಾರವಾಡದಲ್ಲಿ ಆನ್‌ಲೈನ್ ಆಹಾರ ಸರಬರಾಜು ಸಂಸ್ಥೆ ‘ಸ್ವಿಗ್ಗಿ’ಯಲ್ಲಿ ಪಾರ್ಟ್ ಟೈಮ್ ಡೆಲಿವರಿ ಬಾಯ್ಸ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಹುಬ್ಬಳ್ಳಿ-ಧಾರವಾಡದ ಈ ಯುವಕರ ತಂಡವು ಧಾರವಾಡದಿಂದ ರಾತ್ರಿ ವೇಳೆ ಧರ್ಮಸ್ಥಳ ಹಾಗೂ ಮಂಗಳೂರು ಕಡೆಗೆ ಪ್ರವಾಸ ಹೊರಟಿತ್ತು. ಚಾಲಕ ಸೇರಿದಂತೆ ಒಟ್ಟು 9 ಜನರಿದ್ದ ತೂಫಾನ್ ವಾಹನವು ಅರಬೈಲ್ ಘಾಟ್‌ನ ಬಳಗಾರ್ ತಲುಪುತ್ತಿದ್ದಂತೆ, ಎದುರಿನಿಂದ ಬಂದ ಲಾರಿ ನಡುವೆ ಭೀಕರವಾಗಿ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸ ಎಷ್ಟಿತ್ತೆಂದರೆ ತೂಫಾನ್ ವಾಹನವು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಒಳಗೆ ಕುಳಿತಿದ್ದವರು ಹೊರಬರಲಾರದ ಸ್ಥಿತಿ ನಿರ್ಮಾಣವಾಗಿತ್ತು. ತೀವ್ರ ರಕ್ತಸ್ರಾವ ಹಾಗೂ ಗಾಯಗಳಿಂದಾಗಿ ವಾಹನದಲ್ಲಿದ್ದ ಆರು ಜನರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ.

ಮೃತರ ಗುರುತು: ಅಪಘಾತದಲ್ಲಿ ಮೃತಪಟ್ಟವರನ್ನು ಬಸವರಾಜ್ (48 ವರ್ಷ), ಅಭಿಷೇಕ್ ಈಶ್ವರ್ (28 ವರ್ಷ), ಅಕ್ಷಯ (26 ವರ್ಷ), ಅಭಿಷೇಕ್ (26 ವರ್ಷ), ವಾಹನ ಚಾಲಕ ಸಂಜೀವ ಅಲಿಯಾಸ್ ಸಂಜಯ ಅಂಗಡಿ (33 ವರ್ಷ) ಹಾಗೂ ಮಂಜುನಾಥ ಚುಲಕಿ (32 ವರ್ಷ) ಎಂದು ಗುರುತಿಸಲಾಗಿದೆ.

ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಶಿವರಾಜ್ ದುರ್ಗಪ್ಪ ಮಡಿವಾಳ್ (22 ವರ್ಷ), ಸಚಿನ್ ಮತ್ತು ಚೆನ್ನಬಸಯ್ಯ ಬಸಲಿಂಗಯ್ಯ ಸಂಪಗಾವ (28 ವರ್ಷ) ಅವರನ್ನು ಸ್ಥಳೀಯರು ಹಾಗೂ ಪೊಲೀಸರ ನೆರವಿನಿಂದ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.

ಘಟನಾ ಸ್ಥಳಕ್ಕೆ ಯಲ್ಲಾಪುರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸದ್ಯ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

- Advertisement -

Latest News

error: Content is protected !!