ಬಜ್ಜೆ: ನಾಲ್ಕು ಪತ್ಯೇಕ ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯೋರ್ವನನ್ನು ಬಜ್ಜೆ ಪೊಲೀಸರು ಬಂಧಿಸಿ, ಆರೋಪಿಯು ಕಳವುಗೈದಿದ್ದ ನಗದು, ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ನಡೆದಿದೆ.
ಆರೋಪಿ ಮೂಡುಪೆರಾರ ಗ್ರಾಮದ ಮಿತ್ತಕೊಳಪಿಲದ ನಿವಾಸಿ ಪ್ರತಾಪ್. ಬಂಧಿತ ಆರೋಪಿಯಿಂದ ಪೊಲೀಸರು 10 ಸಾವಿರ ರೂ. ನಗದು, ಸುಮಾರು 1ಲಕ್ಷ ರೂ. ಮೌಲ್ಯದ 4 ಗೋಣಿ ಚೀಲ ಸುಲಿದ ಅಡಿಕೆ, ಸುಮಾರು 2 ಲಕ್ಷ ರೂ. ಮೌಲ್ಯದ ಆಟೋ ರಿಕ್ಷಾ ಮತ್ತು ಇತರ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆಯ ವಿವರ: ಫೆ.13ರಂದು ಮಿತ್ತಕೊಳಪಿಲದ ಬಳಿಯ ಜನಾರ್ದನ ಗೌಡ ಎಂಬವರ ಮನೆಯಲ್ಲಿದ್ದ 40 ಸಾವಿರ ರೂ. ಹಣ ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಬಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಕಾರ್ಯಾಚರಣೆ ನಡೆಸಿದ ಪೊಲೀಸರು ಸಂಶಯದ ಮೇಲೆ ಪ್ರತಾಪ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿ ಪ್ರತಾಪ್ ಜನಾರ್ದನ ಗೌಡರ ಮನೆಯಿಂದ ನಗದು ಕಳವುಗೈದಿರುವುದು ಮತ್ತು 2023ರಲ್ಲಿ ಕೊಂಪದವು ನೆಲ್ಲಿಗುಡ್ಡೆಯ ನಿವಾಸಿ ಗೋವಿಂದ ಗೌಡ ಎಂಬವರ ಮನೆಯಿಂದ 4 ಗೋಣಿ ಚೀಲದಲ್ಲಿ ತುಂಬಿಸಿದ್ದ ಸುಲಿದ ಅಡಿಕೆಯನ್ನು ಕಳವು ಮಾಡಿರುವುದು ಮತ್ತು ಇತರ ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೆ, ಆರೋಪಿಯ ವಿರುದ್ಧ ಬ್ಯಾಟರಿಗಳನ್ನು ಕಳವು ಮಾಡಿರುವ ಎರಡು ಪ್ರತ್ಯೇಕ ಪ್ರಕರಣಗಳು ಬಜ್ಜೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.