ಮಡಿಕೇರಿ: ಜಮ್ಮು-ಕಾಶ್ಮೀರದಲ್ಲಿ ಸಂಭವಿಸಿದ ಸೇನಾ ವಾಹನ ಪ್ರಪಾತಕ್ಕೆ ಉರುಳಿದ ದುರಂತದಲ್ಲಿ ಕರ್ನಾಟದ ಮೂವರು ಸೈನಿಕರು ಹುತಾತ್ಮರಾಗಿದ್ದು, ಈ ನಡುವೆ ಗಂಭೀರ ಗಾಯಗೊಂಡು ಶ್ರೀನಗರದ ಉದಂಪುರ್ ಕಮಾಂಡೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತೋರ್ವ ಕೊಡಗಿನ ಯೋಧ ದಿವಿನ್ (28) ಭಾನುವಾರ ರಾತ್ರಿ ಹುತಾತ್ಮರಾಗಿದ್ದಾರೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ದಾಪುರ ಗ್ರಾಮದ 28 ವರ್ಷದ ದಿವಿನ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದರು.
ಮಗನ ಪರಿಸ್ಥಿತಿಯ ಮಾಹಿತಿಯನ್ನು ತಿಳಿದ ದಿವಿನ್ ಅವರ ತಾಯಿ ಹಾಗೂ ಕುಟುಂಬಸ್ಥರು ಶುಕ್ರವಾರ ಶ್ರೀನಗರಕ್ಕೆ ಹೊರಟ್ಟಿದ್ದರು. ಶ್ರೀನಗರದ ಆಸ್ಪತ್ರೆಗೆ ತೆರಳಿ ಮಗನ ಪರಿಸ್ಥಿತಿ ಕಂಡು ದುಃಖಿಸಿದ್ದು, ಈ ಸಂದರ್ಭದಲ್ಲಿ ತಾಯಿಯ ಧ್ವನಿ ಕೇಳಿ ಚಿಕಿತ್ಸೆಗೆ ಸ್ಪಂದಿಸುವ ರೀತಿಯಲ್ಲಿ ದಿವಿನ್ ಕಣ್ಣಿನ ರೆಪ್ಪೆ ತೆರೆದು ನೋಡಿದ್ದರೆಂದು ಹೇಳಲಾಗಿದೆ. ನಂತರದಲ್ಲಿ ಕಣ್ಣು ಮುಚ್ಚಿಕೊಂಡು ಮತ್ತೆ ಮಲಗಿದರಂತೆ. ಇದರಿಂದ ಜಯ ಅವರು ಮಗನ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆಯಾಗುತ್ತಿಎ ಎಂದು ಸಮಾಧಾನಪಟ್ಟುಕೊಂಡಿದ್ದರು. ಆದರೆ ಶ್ವಾಸಕೋಶದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ದಿವಿನ್ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಡಿ.30 ಸೋಮವಾರದಂದು ಬೆಳಗ್ಗೆ ಯೋಧನ ಪಾರ್ಥಿವ ಶರೀರವನ್ನು ಹುಟ್ಟೂರಿಗೆ ಕಳಿಸುವ ಪ್ರಕ್ರಿಯೆ ನಡೆಯಲಿದೆ ಎನ್ನಲಾಗಿದೆ.


