ಬೆಳ್ತಂಗಡಿ : ಧರ್ಮಸ್ಥಳ ಸುತ್ತಮುತ್ತ ಮೃತದೇಹ ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ 6 ನೇ ದಿನದ ಶೋಧ ಕಾರ್ಯದಲ್ಲಿ 10 ನೇ ಸ್ಥಳದಲ್ಲೂ ಕಳೇಬರ ಪತ್ತೆಯಾಗದಿರುವುದು ಪ್ರಕರಣದ ದೂರುದಾರ ಅನಾಮಿಕನ ಮೇಲೆಯೇ ವಿಶ್ವಾಸ ಕಳೆದುಕೊಳ್ಳುವಂತೆ ಮಾಡಿದೆ.

ಅನಾಮಿಕ ತಿಳಿಸಿರುವಂತೆ ಜು.28 ರಂದು ಆರಂಭವಾದ ಸ್ಥಳ ಮಹಜರು ಪ್ರಕ್ರಿಯೆಯಿಂದ ಆರಂಭವಾದ ಎಸ್.ಐ.ಟಿ. ಕಾರ್ಯಾಚರಣೆ 6 ನೇ ದಿನಕ್ಕೆ ತಲುಪಿದೆ. ಜು.29 ರಿಂದ ಮೃತದೇಹದ ಹೂತು ಹಾಕಿರುವ ಸ್ಥಳದಲ್ಲಿ ಕಳೇಬರಕ್ಕಾಗಿ ಸತತ ಶೋಧ ಕಾರ್ಯ ನಡೆಸಲಾಗಿದೆ. 6 ನೇ ಸ್ಥಳದಲ್ಲಿ ಮಾನವನ ದೇಹದ ಕಳೇಬರ ಸಿಕ್ಕಿದ್ದು ಬಿಟ್ಟರೆ ಬೇರೆಲ್ಲೂ ಒಂದೇ ಒಂದು ಕುರುಹು ಪತ್ತೆಯಾಗಿಲ್ಲ. ಒಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಸಾರ್ವಜನಿಕರ ಕೆಲಸ ಬದಿಗೊತ್ತಿ ದಿನವಿಡೀ ಅನಾಮಿಕ ದೂರುದಾರಮ ಕಾಯುವಂತಾಗಿದೆ ಎಂದು ಸಾರ್ವಜನಿಕರು ಆಡಿಕೊಳ್ಳುವಂತಾಗಿದೆ.

9 ಮತ್ತು 10 ಸ್ಥಳದಲ್ಲೂ ಏನೇನು ಇಲ್ಲ: ಆರನೇ ದಿನ ಆ.2 ರಂದು ಮಧ್ಯಾಹ್ನ 11.40 ಕ್ಕೆ ಅನಾಮಿಕನ ಜತೆ ಸ್ಥಳಕ್ಕೆ ಆಗಮಿಸಿದ ಎಸ್.ಐ.ಟಿ. ತಂಡ 12 ಗಂಟೆಗೆ ಕಾರ್ಮಿಕರ ಸಹಾಯದಿಂದ ಸುಮಾರು ನಾಲ್ಕು ಅಡಿ ಆಳ ತೆಗೆಯಲಾಯಿತು. ಬಳಿಕ 2:30 ರ ವರೆಗೆ ಮಿನಿ ಹಿಟಾಚಿ ಕಾರ್ಯಾಚರಣೆ ನಡೆಸಿತು. ಕಳೇಬರ ಸಿಗದೇ ಇರುವ ಕಾರಣ ಸ್ಥಳವನ್ನು ಮುಚ್ಚಲಾಯಿತು. 9 ನೇ ಸ್ಥಳದಲ್ಲಿ ಕಳೇಬರ ಸಿಕ್ಕೇ ಸಿಗುತ್ತದೆ ಎಂಬ ಬಹಳಷ್ಟು ನಿರೀಕ್ಷೆಯಲ್ಲಿದ್ದ ಅನಾಮಿಕ ಹಾಗೂ ಅವರ ಪರ ವಕೀಲರು ಸಪ್ಪೆ ಮೋರೆಯಲ್ಲಿ ಹಿಂದಿರುಗಿರುವುದು ಕಂಡುಬಂತು.
ಗುರುತಿಸಿದ 10 ನೇ ಸ್ಥಳವು ಖಾಲಿ ಖಾಲಿ:
ಮಧ್ಯಾಹ್ನ 3.30 ರ ಸುಮಾರಿಗೆ 10 ನೇ ಸ್ಥಳದ ಶೋಧ ಕಾರ್ಯ ಆರಂಭಿಸಲಾಯಿತು. ಆದರೆ ಅರ್ಧ ಕಾರ್ಯಾಚರಣೆ ವೇಳೆ ಸುಮಾರು 4.30 ಕ್ಕೆ ತೀವ್ರ ಮಳೆಯಿಂದ ಕಾರ್ಯಾಚರಣೆಗೆ ತುಸು ತೊಂದರೆಯಾಯಿತು. ಆದರೂ ನಿಯಮಾನುಸಾರ ಆರಂಭಿಸಿದ ಸ್ಥಳ ಶೋಧ ಕಾರ್ಯ ಅರ್ಧದಲ್ಲೇ ನಿಲ್ಲಿಸಲು ಆಗದೇ ಇರುವುದರಿಂದ ಮತ್ತೆ ಹಿಟಾಚಿ ಸಹಾಯ ಪಡೆಯಲಾಯಿತು. ಆದರೂ ಅಲ್ಲೂ ಯಾವುದೇ ಕುರುಹು ಪತ್ತೆಯಾಗದಿರುವುದರಿಂದ ಸಂಜೆ ಸುಮಾರು 5.30 ಕ್ಕೆ ದಿನದ ಕಾರ್ಯಾಚರಣೆ ಸ್ಥಗಿತಗೊಳಿಸಿ ಅನಾಮಿಕನ ಜತೆ ಎಸ್.ಐ.ಟಿ. ಸಹಿತ ಸಹಾಯಕ ಆಯುಕ್ತರು, ತಹಶೀಲ್ದಾರರು ಮರಳಿದರು.

ಪ್ರಕರಣ ಎತ್ತ ಸಾಗುತ್ತಿದೆ?:
ನೇತ್ರಾವತಿ ಸ್ನಾನಘಟ್ಟದಲ್ಲಿ ಬಹಳಷ್ಟು ಮಂದಿ ನದಿಗೆ ಹಾರಿ ಇಲ್ಲವೇ ಬೇರೆಡೆಯಿಂದ ಬಂದ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಸಿಗುವುದು ಸಾಮಾನ್ಯ. ಧರ್ಮಸ್ಥಳ ಗ್ರಾ.ಪಂ. ನಲ್ಲಿ ಇರುವ ವರದಿಯಂತೆ 1986 ರಿಂದ ಈವರೆಗೆ ಒಟ್ಟು 279 (Un identify Body) ವಾರಿಸುದಾರರಿಲ್ಲದ ಮೃತದೇಹ ಲಭ್ಯವಾಗಿದೆಯಂತೆ. ಅವುಗಳಲ್ಲಿ 219 ಪುರುಷ, 46 ಮಹಿಳೆ, 13 ಲಿಂಗ ಪತ್ತೆಯಾಗದಿರುವುದು, 1 ನವಜಾತ ಮಗುವಿನ ಶವದ ಬಗ್ಗೆ ದಾಖಲಿಯಿದೆ. ಧರ್ಮಸ್ಥಳಕ್ಕೆ 2006 ರಲ್ಲಿ ರುದ್ರಭೂಮಿ ಮಂಜೂರಾಗಿದ್ದು, ಇಲ್ಲಿ ಮೃತದೇಹ ದಹನ ಪ್ರಕ್ರಿಯೆಗೆ ಅವಕಾಶವಿತ್ತು. ಆದರೆ ದಹನ ನಡೆಸುತ್ತಿರಲಿಲ್ಲ ಎಂಬ ಮಾಹಿತಿಯಿದೆ. ಆದರೆ ಅನಾಮಿಕ ದೂರು ದಾರನ ಹೇಳಿಕೆಗೂ ಇದಕ್ಕೂ ಸಾಮ್ಯತೆ ಸಿಗುತ್ತಿಲ್ಲ.
ಅನಾಮಿಕ ಹೇಳಿದ್ದೇನು?:
ಅನಾಮಿಕ ದೂರಿನಲ್ಲಿ ತಿಳಿಸಿದಂತೆ ಸೈಟ್ ಸಂಖ್ಯೆ 1, 2, 3 ರಲ್ಲಿ ತಲಾ 2 ದೇಹ, ಸೈಟ್ ಸಂ.4 ಮತ್ತು 5 ರಲ್ಲಿ 6 ದೇಹ, ಸೈಟ್ ಸಂ.-6, 7, 8 ರಲ್ಲಿ 8 ದೇಹ, ಸೈಟ್ ಸಂ.9 ರಲ್ಲಿ 6 ರಿಂದ 7 ದೇಹ, ಸೈಟ್ ಸಂ.10 ರಲ್ಲಿ 3 ದೇಹ, ಸೈಟ್ ಸಂ.11 ರಲ್ಲಿ 9 ದೇಹ, ಸೈಟ್ ಸಂ.12 ರಲ್ಲಿ 4 ರಿಂದ 5 ದೇಹ, ಸೈಟ್ ಸಂ.13 ರಲ್ಲಿ ಅಸಂಖ್ಯಾತ ಸಂಖ್ಯೆಯಲ್ಲಿ ಮೃತದೇಹ ಹೂತಿರುವುದಾಗಿ ಹೇಳಿಕೆ ನೀಡಿದ್ದಾನೆ. ಆದರೆ ಮಹಜರು ಮಾಡಿದ 6 ನೇ ಸ್ಥಳದಲ್ಲಿ ಓರ್ವ ಮನುಷ್ಯನ ಕಳೇಬರಹ ಬಿಟ್ಟರೆ ಇನ್ನೇನು ಸಿಗಲಿಲ್ಲ ಎಂಬುದು ಎಸ್.ಐ.ಟಿ. ಈಗಾಗಲೆ ಖಚಿತಪಡಿಸಿರುವುದಾಗಿದೆ.

ಪ್ರಕರಣದ ಗಮನ ಬೇರೆಡೆ ಸೆಳೆಯುವ ಪ್ರಯತ್ನವೇ?:
ಧರ್ಮಸ್ಥಳದಲ್ಲಿ ಶವಗಳನ್ನು ಹೂತು ಹಾಕಿದ ಪ್ರಕರಣದ ತನಿಖೆಯನ್ನು ಪೊಲೀಸ್ ಇಲಾಖೆ ನಡೆಸಿದರೆ ನಮಗೆ ವಿಶ್ವಾಸವಿಲ್ಲ ಹಾಗಾಗಿ ಎಸ್.ಐ.ಟಿ.ಗೆ ನೀಡಬೇಕು ಎಂದು ಅನಾಮಿಕ ಹಾಗೂ ಅವರ ಪರ ನ್ಯಾಯಾವಾದಿಗಳು ಒತ್ತಾಯಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲಿಗೆ ಎಸ್.ಐ.ಟಿ. ತನಿಖೆಗೆ ನೀಡಲಾಗುವುದಿಲ್ಲ ಎಂದು ಹೇಳಿ ಮರುದಿನ 20 ಡಾ.ಪ್ರಣವ್ ಮೊಹಂತಿ ನೇತೃತ್ವದಲ್ಲಿ ದಕ್ಷ ಅಧಿಕಾರಿಗಳನ್ನು ನೇಮಿಸಿತು. ಪ್ರಕರಣ ನಿರೀಕ್ಷಿಸಿದಂತೆ ಸಾಗದಿರುವ ಹಿನ್ನೆಲೆ ಅನಾಮಿಕ ದೂರುದಾರನಿಗೆ ಎಸ್‌ಐಟಿ ಇನ್‌ಸ್ಪೆಕ್ಟರ್ ಮಂಜುನಾಥ್ ಗೌಡ ಅವರು ದೂರು ವಾಪಾಸ್ ಪಡೆಯುವಂತೆ ಒತ್ತಡ ಹಾಗೂ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಎಸ್‌ಐಟಿ, ಮುಖ್ಯ ಕಾರ್ಯದರ್ಶಿ, ಗೃಹಇಲಾಖೆಗೆ ದೂರು ನೀಡಲಾಗಿದೆ. ಆದರೆ ಇದು ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಎಸ್.ಐ.ಟಿ. ಮುಖ್ಯಸ್ಥ ಡಾ.ಪ್ರಣವ್ ಮೊಹಂತಿ ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ.

ಬೆಳ್ತಂಗಡಿ ಎಸ್.ಐ.ಟಿ. ಕಚೇರಿಗೆ ಹೊಸ ದೂರು:
ಇಷ್ಟೆಲ್ಲ ಬೆಳವಣಿಗೆಗಳ ಮಧ್ಯೆ ಆ.2 ರಂದು ಸಂಜೆ ಬೆಳ್ತಂಗಡಿ ಎಸ್.ಐ.ಟಿ. ಕಚೇರಿಗೆ ಪದ್ಮಲತಾ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಕೆಯ ಸಂಬಂಧಿ ಜಯಂತ್ ಟಿ. ಎಂಬಾತ ಧರ್ಮಸ್ಥಳ ಗ್ರಾಮದಲ್ಲಿ ಸುಮಾರು 12 ವರ್ಷಗಳ ಹಿಂದೆ 13 ರಿಂದ 15 ವರ್ಷದ ಬಾಲಕಿಯ ಸಾವನ್ನಪ್ಪಿ ಕೊಳೆತ ಸ್ಥಿತಿಯಲ್ಲಿರುವುದು ನಾನು ಕಣ್ಣಾರೆ ನೋಡಿದ್ದೇನೆ. ಅಂದು ದೂರು ನೀಡಲು ಭಯವಿತ್ತು. ಇಂದು ಎಸ್.ಐ.ಟಿ. ತಂಡದ ಮೇಲೆ ವಿಶ್ವಾಸವಿದೆ. ಹಾಗಾಗಿ ದೂರು ನೀಡಲು ಬಂದಿರುವೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾನೆ. ಇಷ್ಟೇ ಅಲ್ಲದೆ ಚಾರ್ಮಾಡಿಯಲ್ಲಿ ಬಸ್ ನಿಂದ ತಳ್ಳಿ ಕೊಲೆ ಗೈದಿರುವುದು ಸಹಿತ ಅನೇಕ ಮಾಹಿತಿ ನನ್ನಲ್ಲಿದೆ ಎಸ್.ಐ.ಟಿ. ಅಧಿಕಾರಿಗಳು ಆ.4 ರಂದು ತನಿಖೆಗಾಗಿ ಸೋಮವಾರ ಬರ ಹೇಳಿದ್ದು, ಅಂದು ದೂರು ನೀಡುವುದಾಗಿ ಹೇಳುವ ಮೂಲಕ ಹೊಸ ಪ್ರಕರಣ ಹುಟ್ಟಿಕೊಂಡಿದೆ.

ಇನ್ನು ಅನಾಮಿಕ ತೋರಿಸಿರುವಂತೆ 11, 12 ಮತ್ತು 13 ನೇ ಸ್ಥಳಗಳಲ್ಲಿ ಕಳೇಬರಕ್ಕಾಗಿ ಶೋಧ ಕಾರ್ಯ ನಡೆಯಬೇಕಿದ್ದು, ಬಹುತೇಕ ಸೋಮವಾರ ಕಾರ್ಯಾಚರಣೆ ಮುಂದುವರೆಸುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಅನಾಮಿಕನ ದೂರಿನಿಂದ ಧರ್ಮಸ್ಥಳ ಹೆಸರು ರಾಷ್ಟ್ರಮಟ್ಟದಲ್ಲಿ ಕಪ್ಪುಚುಕ್ಕೆಯಾಗಿ ಪರಿಣಮಿಸುತ್ತಿದ್ದು, ಇದರಿಂದ ಸತ್ಯಾಸತ್ಯತೆ ಹೊರಬರಲಿ ಎಂಬ ಸಾರ್ವಜನಿಕರ ಕೂಗಿನ ಮಧ್ಯೆ ಹಲವು ಗೊಂದಲಗಳನ್ನು ಸೃಷ್ಟಿಸುವಂತೆ ಮಾಡಿದೆ. ಒಟ್ಟಾರೆಯಾಗಿ ಅನಾತ ಶವಗಳಿಗೆ ನ್ಯಾಯ ಕೊಡಿಸುವ ಭರದಲ್ಲಿ ಧರ್ಮಸ್ಥಳ ಫೈಲ್ಸ್ ಎಂಬ ಹೆಸರಿಟ್ಟು ಪ್ರಕರಣ ಜೀವಂತವಾಗಿಡುವ ಎಲ್ಲ ಪ್ರಯತ್ನಗಳು ಕಾಣದ ಕೈಗಳಿಂದ ನಡೆಯುತ್ತಿದೆಯೇ ಎಂಬ ಚರ್ಚೆ ಸಾರ್ವಜನಿಕ ವಲಯದ್ದಲ್ಲಿ ಎದ್ದಿದೆ.


