ಮಂಗಳೂರು : ಹೊಸ ವರ್ಷಕ್ಕೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕಂಪೆನಿ ಮಂಗಳೂರಿಗರಿಗೆ ಭರ್ಜರಿ ಕೊಡುಗೆಯನ್ನು ನೀಡಿದೆ. 2025ರ ಜನವರಿ 21 ರಿಂದ ಮಂಗಳೂರಿನಿಂದ ಸಿಂಗಾಪುರಕ್ಕೆ ನೇರ ವಿಮಾನ ಯಾನ ಶುರುವಾಗಲಿದೆ.
ಈ ವಿಮಾನಯಾನ ಸೇವೆಯು ಪ್ರತೀ ವಾರದ ಮಂಗಳವಾರ ಮತ್ತು ಶುಕ್ರವಾರಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಐಎಕ್ಸ್ 862 ವಿಮಾನವು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 5.55 ಕ್ಕೆ ಹೊರಟು 13.25 ಕ್ಕೆ ಸಿಂಗಾಪುರ ತಲಪುತ್ತದೆ. ಮರು ಪ್ರಯಾಣದಲ್ಲಿ ಐಎಕ್ಸ್ 861 ವಿಮಾನ ಸಿಂಗಾಪುರದಿಂದ 14.25 ಕ್ಕೆ ಹೊರಟು 16.55 ಕ್ಕೆ ಮಂಗಳೂರು ತಲಪುತ್ತದೆ.
ಮಂಗಳೂರಿನಿಂದ ಸಿಂಗಾಪುರಕ್ಕೆ ನೇರವಾಗಿ ವಿಮಾನಯಾನ ಕಲ್ಪಿಸುವ ಬಗ್ಗೆ ಸಂಸದ ಬ್ರಿಜೇಶ್ ಚೌಟ ಅವರು 2024 ರ ಸೆಪ್ಟೆಂಬರ್‌ನಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರಿಗೆ ಮನವಿ ಸಲ್ಲಿಸಿದ್ದರು.
ಇನ್ನು ದಿಲ್ಲಿಗೂ ಕೂಡ ಫೆಬ್ರವರಿ 1, 2025 ರಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮಂಗಳೂರು ಮತ್ತು ರಾಜಧಾನಿ ದಿಲ್ಲಿ ನಡುವೆ ದೈನಂದಿನ ತಡೆರಹಿತ ವಿಮಾನ ಹಾರಾಟ ಸೌಲಭ್ಯವನ್ನು ಆರಂಭಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.