ಕೊಡಗಿನಲ್ಲೊಂದು ಅಚ್ಚರಿಯ ಘಟನೆ ನಡೆದಿದೆ. ಕಾಫಿತೋಟದಲ್ಲಿ ನಾಪತ್ತೆಯಾಗಿದ್ದ 2 ವರ್ಷದ ಮಗುವನ್ನು ಶ್ವಾನ ಹುಡುಕಿಕೊಟ್ಟಿದೆ.
ಅಷ್ಟಕ್ಕೂ ಆಗಿದ್ದೇನು ಗೊತ್ತಾ?.. ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕೊಂಗಣ ಗ್ರಾಮದಲ್ಲಿ ಕಾಫಿ ಕೊಯ್ಲು ಹಿನ್ನೆಲೆ ಕಾರ್ಮಿಕ ದಂಪತಿ ಸುನಿಲ್ ಮತ್ತು ನಾಗಿಣಿ ತಮ್ಮ ಇಬ್ಬರು ಮಕ್ಕಳನ್ನು ಜೊತೆಯೇ ಕರೆದೊಯ್ದಿದ್ದರು. ಕಾಫಿ ತೋಟದಲ್ಲಿ ಕೆಲಸ ನಿರತರಾಗಿದ್ದ ಅವರು ಸಂಜೆ ವೇಳೆ ಗಮನಿಸಿದಾಗ ಇಬ್ಬರು ಮಕ್ಕಳ ಪೈಕಿ 2 ವರ್ಷದ ಮಗು ಸುಕನ್ಯಾ ನಾಪತ್ತೆಯಾಗಿರೋದು ಗೊತ್ತಾಗಿದೆ.
ಗಾಬರಿಗೊಂಡ ದಂಪತಿ ಮಗುವಿಗಾಗಿ ಒಂದಿಷ್ಟು ಹುಡುಕಾಡಿದ್ದಾರೆ. ಅದರೆ ಮಗು ಪತ್ತೆಯಾದ ಕಾರಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಅವರೂ ಕೂಡ ಸ್ಥಳಕ್ಕೆ ಬಂದಿದ್ದು, ಸುಕನ್ಯಾಗಾಗಿ ಕಾಫಿ ತೋಟದ ತುಂಬ ಹುಡುಕಾಡಿದ್ದಾರೆ. ಬಳಿಕ ಅನಿಲ್ ಎಂಬುವರ ಶ್ವಾನಗಳನ್ನು ಕೂಡ ಬಳಕೆ ಮಾಡಿಕೊಂಡಿದ್ದರು. ಈ ವೇಳೆ ಆ ನಾಯಿಗಳ ಪೈಕಿ ಓರಿಯೋ ಎಂಬ ಶ್ವಾನ ಸುಕನ್ಯಾಳನ್ನ ಪತ್ತೆ ಮಾಡಿದೆ. ಕಾಫಿ ತೋಟದ ಎತ್ತರದ ಪ್ರದೇಶದಲ್ಲಿ ಮಗುವನ್ನು ನೋಡಿ ಓರಿಯೋ ಶ್ವಾನ ಬೊಗಳಲು ಆರಂಭಿಸಿದೆ. ಹೀಗಾಗಿ ಆ ಭಾಗದಲ್ಲಿ ನೋಡಿದಾಗ ಸುಕನ್ಯಾ ಪತ್ತೆಯಾಗಿದ್ದಾಳೆ. ದಟ್ಟ ಕಾರ್ಗತ್ತಲಿನಲ್ಲೇ ಒಂದು ದಿನ ಕಳೆದಿದ್ದ ಮಗು ಸುರಕ್ಷಿತವಾಗಿ ಮನೆಗೆ ಮರಳಿದೆ. ಮಗಳ ನಾಪತ್ತೆಯಿಂದ ಕಂಗಾಲಾಗಿದ್ದ ಸುನಿಲ್ ಮತ್ತು ನಾಗಿಣಿ ದಂಪತಿ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಸಾರ್ವಜನಿಕರು ಹೆತ್ತವರ ನಿರ್ಲಕ್ಷ್ಯಕ್ಕೆ ಆಕ್ರೋಶ ಹೊರ ಹಾಕಿದ್ದಾರೆ. ಪುಟ್ಟ ಮಗುವನ್ನು ಮರೆತು ಕೆಲಸದಲ್ಲಿ ಕಳೆದು ಹೋಗುವವರು ಎಂತಹ ಹೆತ್ತವರು ಅಂತಾ ಪ್ರಶ್ನಿಸಿದ್ದಾರೆ.


