ಸ್ಪೈಸ್ಜೆಟ್ ಸಂಸ್ಥೆಯ ವಿಮಾನಗಳಲ್ಲಿ ಸಾಲು ಸಾಲು ತಾಂತ್ರಿಕ ದೋಷಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ವಿಮಾನಗಳ ಹಾರಾಟ ಸ್ಥಗಿತಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.
ಸಾರ್ವಜನಿಕ ಹಿತಾಸಕ್ತಿ ಮೇರೆಗೆ, ವಕೀಲ ರಾಹುಲ್ ಭಾರಧ್ವಾಜ್ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರಸಾದ್ ಅವರ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.”ನ್ಯಾಯಾಲಯವು ವಿಮಾನಯಾನ ಸಂಸ್ಥೆಗಳನ್ನು ನಡೆಸಲು ಸಾಧ್ಯವಿಲ್ಲ. ಯಾವ ವಿಮಾನಗಳನ್ನು ಹಾರಿಸಬೇಕು. ಯಾವ ವಿಮಾನಗಳನ್ನು ಹಾರಿಸಬಾರದು ಎಂಬ ಬಗ್ಗೆ ನಿರ್ದೇಶನ ನೀಡಲು ಬರುವುದಿಲ್ಲ. ನಾವು ಕಾನೂನು ಚೌಕಟ್ಟಿನೊಳಗೆ ಆದೇಶ ನೀಡಬೇಕು” ಎಂದು ಅರ್ಜಿದಾರರಿಗೆ ವಿಭಾಗೀಯ ಪೀಠ ಹೇಳಿದೆ ಎಂದು ತಿಳಿದು ಬಂದಿದೆ.
ಇನ್ನು ಅರ್ಜಿಯಲ್ಲಿ, “ಪ್ರಯಾಣಿಕರ ಜೀವ ಮತ್ತು ಆಸ್ತಿಪಾಸ್ತಿಗೆ ಹಾನಿ ಉಂಟು ಮಾಡುವಂತಹ ಅಪಘಾತವನ್ನು ತಡೆಯುವ ಉದ್ದೇಶದಿಂದ ಸ್ಪೈಸ್ಜೆಟ್ನ ವಿಮಾನಗಳನ್ನು ಸ್ಥಗಿತಗೊಳಿಸಬೇಕಿದೆ. ಹಾಗೂ ಅನೇಕ ದುರ್ಘಟನೆಗಳು ಮತ್ತು ಕೂದಲೆಳೆ ಅಂತರದಲ್ಲಿ ಪಾರಾದ ಸನ್ನಿವೇಶಗಳು ಘಟಿಸಿದ್ದರೂ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಕ್ರಮ ಕೈಗೊಂಡಿಲ್ಲ. ಇದು ಸಂವಿಧಾನದ 21ನೇ ವಿಧಿಯಡಿ ಪ್ರಯಾಣಿಕರ ಜೀವಿಸುವ ಹಕ್ಕಿನ ಉಲ್ಲಂಘನೆ” ಎಂದು ಉಲ್ಲೇಖಗೊಂಡಿದೆ.
ಸ್ಪೈಸ್ಜೆಟ್ ಸಂಸ್ಥೆಯು ಈಗಾಗಲೇ ಆರ್ಥಿಕ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದು, ಸರಣಿ ಅಪಘಾತಗಳ ನಂತರ ಇತ್ತೀಚೆಗೆ ಸಂಸ್ಥೆಯು ಸುದ್ದಿಯಲ್ಲಿದೆ. ಇನ್ನು ಸಂಸ್ಥೆಯ ದೆಹಲಿ- ದುಬೈ ವಿಮಾನ ತಾಂತ್ರಿಕ ದೋಷದಿಂದಾಗಿ ಕರಾಚಿಯಲ್ಲಿ ಇಳಿದರೆ, ಮತ್ತೊಂದು ವಿಮಾನದ ವಿಂಡ್ಶೀಲ್ಡ್ ಒಡೆದಿತ್ತು. ಪಾಟ್ನಾದಿಂದ ಹಾರಾಟ ಆರಂಭಿಸಿದ್ದ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡು ಕೆಲವೇ ನಿಮಿಷಗಳಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾದ ಸನ್ನಿವೇಶ ಎದುರಾಗಿತ್ತು.ಇಂತಹ ಸರಣಿ ಅವಘಡಗಳು ಮತ್ತು ದೋಷಗಳ ಹಿನ್ನೆಲೆಯಲ್ಲಿ ಇದೀಗ ಆ ಸಂಸ್ಥೆಯ ವಿಮಾನ ಹಾರಾಟವನ್ನೇ ಸ್ಥಗಿತಗೊಳಿಸಬೇಕು ಎಂದು ಕೋರಿ ದೆಹಲಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಲಾಗಿತ್ತು .


