ಮುಂಬೈ : ಈ ಬಾರಿಯ ‘ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2022’ ಕಿರೀಟವನ್ನು ಕರಾವಳಿಯ ಬೆಡಗಿ ಸಿನಿ ಶೆಟ್ಟಿ ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಪ್ರಸ್ತುತ ವಾಣಿಜ್ಯ ನಗರಿಯಲ್ಲಿ ವಾಸವಿರುವ ಸಿನಿ ಶೆಟ್ಟಿ ಮೂಲತಃ ದಕ್ಷಿಣಕನ್ನದವರು ಅನ್ನೋದು ಕರಾವಳಿಗರಿಗೆ ಹೆಮ್ಮೆಯ ವಿಚಾರ.
ಮುಂಬೈನ JIO ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ 21 ವರ್ಷದ ಸಿನಿ ಶೆಟ್ಟಿ ಮಿಸ್ ಇಂಡಿಯಾ ಪಟ್ಟ ಅಲಂಕರಿಸಿದ್ದಾರೆ. ಶೇಖಾವತ್ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದು, ಶಿನಾತಾ ಚೌಹಾಣ್ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.
ಸಿನಿ ಶೆಟ್ಟಿ ಭಾರತದ 58ನೇ ಮಿಸ್ ಇಂಡಿಯಾ ಸೌಂದರ್ಯವತಿಯಾಗಿ ಹೊರಹೊಮ್ಮಿದ್ದು, 2020ರ ಮಿಸ್ ಇಂಡಿಯಾ ವಿಜೇತೆ ಮಾನಸಾ ವಾರಣಾಸಿ ಅವರು, ಸಿನಿಗೆ ಈ ಕಿರೀಟ ತೊಡಿಸಿದರು. ಮುಂದಿನ ಆವೃತ್ತಿಯ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಸಿನಿ ಶೆಟ್ಟಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಭಾನುವಾರ, ಫೆಮಿನಾ ಮಿಸ್ ಇಂಡಿಯಾದ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆ ಮೂಲಕ ವಿಜೇತರನ್ನು ಘೋಷಿಸಲಾಯಿತು. ಈ ನಾರಿಯರಲ್ಲಿ ಶಕ್ತಿಯುತ ಧ್ವನಿ ಇದೆ ಮತ್ತು ಅವರು ಈ ವೇದಿಕೆಯನ್ನು ಇನ್ನಷ್ಟು ಉತ್ತಮ ಕಾರಣಕ್ಕಾಗಿ ಬಳಸಲಿದ್ದಾರೆ ಎಂದು ನಮಗೆ ಖಚಿತವಾಗಿದೆ. ಅವರು ಈ ಸ್ಥಾನಕ್ಕಾಗಿ ತೋರಿದ ಅದಮ್ಯ ಉತ್ಸಾಹವನ್ನು ನಾವು ನೋಡಿದ್ದೇವೆ. ಇವರೆಲ್ಲಾ ಈ ಪಟ್ಟ ಪಡೆಯಲು ಎಲ್ಲಾ ರೀತಿಯಲ್ಲೂ ಅರ್ಹರು. ಮೂವರಿಗೂ ಅಭಿನಂದನೆಗಳು ಎಂದು ಸಾಮಾಜಿಕ ಜಾಲತಾಣದ ಮೂಲಕ ಘೋಷಿಸಲಾಗಿದೆ.