ಉಡುಪಿ: ಉಡುಪಿ ಜಿಲ್ಲೆಯ ಪರ್ಕಳ ನಿವಾಸಿಗಳಿಗೆ ವಿಚಿತ್ರ ಹುಳುವಿನ ಉಪಟಳ ಶುರುವಾಗಿದೆ. ಹೌದು ನಗರದ ಹಲವೆಡೆ ಆಫ್ರಿಕನ್ ಮಾದರಿಯ ಬಸವನ ಹುಳುವಿನ ಕಾಟ ಶುರುವಾಗಿದೆ. ರಕ್ತಬೀಜಾಸುರ ನಂತೆ ನಿರಂತರ ಸಂತಾನೋತ್ಪತ್ತಿಯಿಂದ ಊರಿನ ಯಾವ ಮೂಲೆಗೆ ಹೋದರೂ ಬರೇ ಹುಳುಗಳೇ ಕಾಣಿಸುತ್ತವೆ. ಇದ್ರಿಂದ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ.
ಪರ್ಕಳ ಸಮೀಪದ ಬಿಎಂ ಸ್ಕೂಲ್ ನ ಗೋಡೆಗಳು,ಅಂಗನವಾಡಿಯ ಗೋಡೆಗಳ ಮೇಲೆ ಹಾಗೂ ಪರ್ಕಳ ದೇವಿ ನಗರದ ಮನೆಗಳ ಕಾಂಪೌಂಡ್ ಸುತ್ತಲೂ ಆಫ್ರಿಕನ್ ಮಾದರಿಯ ಬಸನ ಹುಳು ಬಾಧೆ ಕಂಡು ಬಂದಿದೆ. ಸ್ಥಳೀಯ ಅಬ್ದುಲ್ ಸತ್ತಾರ್ ಅವರು ಹೇಳುವ ಪ್ರಕಾರ ,ಕಳೆದ ವರ್ಷ ಕೂಡ ಇದೇ ರೀತಿ ಬಸವನ ಹುಳು ಕಾಣಿಸಿಕೊಂಡಾಗ 9 ಗೋಣಿ ಕಲ್ಲು ಉಪ್ಪು ಬಳಸಲಾಗಿತ್ತು. ಆದರೂ ಕೂಡ ಈ ಹುಳದ ಉಪಟಳ ಕೊನೆಗೊಂಡಿಲ್ಲ. ಈ ವರ್ಷ ಮಳೆ ಆರಂಭವಾದಾಗ ತಮ್ಮ ಮನೆಯ ಗೋಡೆಯಲ್ಲಿ ಈ ಹುಳ ಕಂಡುಬಂದಿದ್ದು ಮನೆಯ ಗಿಡಗಂಟೆಗಳನ್ನು ತಿನ್ನಲು ಶುರು ಮಾಡಿವೆ.ಈ ಪರಿಸರದಲ್ಲಿ ಬಸವನ ಹುಳುವಿನಿಂದ ತೊಂದರೆಯಾಗುತ್ತಿದ್ದು ಕಳೆದ ವರ್ಷ ನಗರಸಭೆ ಯಾವುದೇ ಸೂಕ್ತ ಕ್ರಮ ಕೈಗೊಳ್ಳದೆ ಇರುವುದರಿಂದ ಈ ಬಾರಿ ಕೂಡ ಸಾರ್ವಜನಿಕರಿಗೆ ಸಮಸ್ಯೆಯಾಗಿದೆಯಂತೆ.
ಈ ಹುಳವು ಸುರಿಸುವ ಎಂಜಲು ಬಲು ವಾಸನೆಯಿಂದ ಕೂಡಿದ್ದು, ಪರಿಸರದಲ್ಲಿ ವಿಪರೀತ ದುರ್ವಾಸನೆ ಹರಡುತ್ತಿದೆ. ರಾತ್ರಿಯ ಹೊತ್ತು ಈ ಹುಳ ಶಬ್ದ ಮಾಡುತ್ತದೆ. ಮಳೆಬಂದಾಗ ಭೂಮಿಯ ಮೇಲೆ ಸಂಚರಿಸುತ್ತದೆ.ಆದ್ದರಿಂದ ನಗರಸಭೆಯ ಆರೋಗ್ಯ ಅಧಿಕಾರಿಗಳು ಈ ಹುಳು ಬಾಧೆಗೆ ಕೀಟನಾಶಕವನ್ನು ಸಿಂಪಡಿಸಿ ಇದಕ್ಕೊಂದು ಶಾಶ್ವತ ಪರಿಹಾರ ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತರಾದ ಗಣೇಶ್ ರಾಜ್ ಸರಳೇಬೆಟ್ಟು ಹಾಗೂ ರಾಜೇಶ್ ಪ್ರಭು ಪರ್ಕಳ ಆಗ್ರಹಿಸಿದ್ದಾರೆ.