Thursday, June 4, 2026
Homeಕರಾವಳಿಉಡುಪಿಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ: ಹಿಂಡಲಗಾ ಗ್ರಾ.ಪಂ.ಅಧ್ಯಕ್ಷರ ಮೊಬೈಲ್ ವಶಕ್ಕೆ ಪಡೆದ ಉಡುಪಿ ಪೊಲೀಸರು

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ: ಹಿಂಡಲಗಾ ಗ್ರಾ.ಪಂ.ಅಧ್ಯಕ್ಷರ ಮೊಬೈಲ್ ವಶಕ್ಕೆ ಪಡೆದ ಉಡುಪಿ ಪೊಲೀಸರು

- Advertisement -
- Advertisement -

ಬೆಳಗಾವಿ: ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಂಬಂಧ ಈಗಾಗಲೇ ಬೆಳಗಾವಿಯಲ್ಲಿ ಒಂದು ಸುತ್ತಿನ ತನಿಖೆ ನಡೆಸಿ ತೆರಳಿದ್ದ ಉಡುಪಿ ಪೊಲೀಸರು ಮತ್ತೆ ಕುಂದಾನಗರಿಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ಸ್‌ಪೆಕ್ಟರ್ ಶರಣಗೌಡ ಪಾಟೀಲ್ ನೇತೃತ್ವದಲ್ಲಿ ತನಿಖೆ ಚುರುಕುಗೊಂಡಿದ್ದು ಹಿಂಡಲಗಾ ಗ್ರಾಮ ಪಂಚಾಯತಿ ಅಧ್ಯಕ್ಷ ನಾಗೇಶ್ ಮನ್ನೋಳಕರ್ ಮೊಬೈಲ್ ವಶಕ್ಕೆ ಪಡೆದಿದ್ದಾರೆ.

ಹಿಂಡಲಗಾ ಗ್ರಾ‌ಮ ಪಂಚಾಯತಿ ಅಧ್ಯಕ್ಷ ನಾಗೇಶ್ ಮನ್ನೋಳಕರ್ ಹಾಗೂ ಗ್ರಾ.ಪಂ.ಸದಸ್ಯ ಉದ್ಯಮಿ ಎನ್.ಎಸ್.ಪಾಟೀಲ್ ವಿರುದ್ಧ ಸಂತೋಷ ಪಾಟೀಲ್ ಮನೆ ಜಿಪಿಎ ಮಾಡಿಸಿಕೊಂಡು ಸಾಲ ನೀಡಿದ ಆರೋಪ ಕೇಳಿ ಬಂದಿತ್ತು. ಗುತ್ತಿಗೆದಾರ ಸಂತೋಷ ಪಾಟೀಲ್ ಮನೆ ಜಿಪಿಎ ಮಾಡಿಸಿಕೊಂಡಿದ್ದು ಏಕೆ? ಜಿಪಿಎ ಮಾಡಿಸಿಕೊಂಡು ಎಷ್ಟು ಹಣ ಕೊಟ್ಟಿದ್ರಿ? 108 ಕಾಮಗಾರಿ ಆರಂಭಿಸಲು ಹೇಳಿದ್ದು ಯಾರು? ಎಂಬ ಬಗ್ಗೆ ಹೆಚ್ಚಿನ ವಿಚಾರಣೆಯನ್ನು ನಡೆಸಲಾಗುತ್ತಿದ್ದು, ನಾಗೇಶ್ ಮನ್ನೋಳಕರ್ ಮೊಬೈಲ್ ಅನಾಲಿಸಿಸ್‌ಗೆ ಕಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ‌‌.

ಹಿಂಡಲಗಾ ಗ್ರಾ‌ಮ ಪಂಚಾಯತಿಯ 35 ಸದಸ್ಯರಿಗೂ ವಿಚಾರಣೆಗೆ ಹಾಜರಾಗಲು ಸೂಚ‌ನೆ ನೀಡಿದ್ದು ಪ್ರತಿಯೊಬ್ಬ ಸದಸ್ಯರ ಪ್ರತ್ಯೇಕವಾಗಿ ಒನ್ ಟು ಒನ್ ವಿಚಾರಣೆ ನಡೆಸಿ, ‘ನಿಮ್ಮ ವಾರ್ಡ್‌ನಲ್ಲಿ ಸಂತೋಷ ಪಾಟೀಲ್ ಕಾಮಗಾರಿ ಮಾಡಿದ್ದಾರಾ? ಕಾಮಗಾರಿ ಮಾಡಿದ್ರೆ ಎಷ್ಟು ವೆಚ್ಚದಲ್ಲಿ ಕಾಮಗಾರಿ ಮಾಡಿದ್ದಾರೆ? ಯಾವ ಯೋಜನೆಯಲ್ಲಿ ಕಾಮಗಾರಿ ಮಾಡುತ್ತಿರೋದಾಗಿ ಹೇಳಿದ್ರು? ಸಂತೋಷ ಪಾಟೀಲ್‌ರವರೇ ಕಾಮಗಾರಿ ಮಾಡಿದ್ದಾರಾ ಉಪಗುತ್ತಿಗೆದಾರರು ಮಾಡಿದ್ದಾರಾ?’ ಎಂಬ ಎಲ್ಲಾ ಮಾಹಿತಿ ಪಡೆದು ಪೊಲೀಸರು ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದಾರೆ. ಮಹಿಳಾ ಗ್ರಾ.ಪಂ. ಸದಸ್ಯರ ವಿಚಾರಣೆಗೆ ಮಹಿಳಾ ಪೇದೆಗಳ ನಿಯೋಜನೆ ಮಾಡಲಾಗಿದ್ದು ಸಂತೋಷ ಪಾಟೀಲ್‌ನಿಂದ ಉಪಗುತ್ತಿಗೆ ಪಡೆದ 12 ಉಪಗುತ್ತಿಗೆದಾರರಿಂದಲೂ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಉಪಗುತ್ತಿಗೆ ಪಡೆದು ಕಾಮಗಾರಿ ಮಾಡಿದ ವೆಚ್ಚ, ಕಾಮಗಾರಿಗೆ ಸಾಮಗ್ರಿ ಖರೀದಿಸಿದ್ದ ರಸೀದಿ ಸೇರಿ ಎಲ್ಲಾ ದಾಖಲೆ ನೀಡುವಂತೆಯೂ ಸೂಚನೆ ನೀಡಲಾಗಿದೆ. ಇನ್ನು ಹಿಂಡಲಗಾ ಗ್ರಾಮ ಪಂಚಾಯತಿ ಅಧ್ಯಕ್ಷ ನಾಗೇಶ್ ಮನ್ನೋಳಕರ್‌ಗೆ ನೋಟಿಸ್ ನೀಡಿ ಉಡುಪಿಗೆ ಕರೆಯಿಸಿ ಅಲ್ಲಿಯೂ ವಿಚಾರಣೆ ನಡೆಸಲಾಗಿದೆ ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ಲಭ್ಯವಾಗಿದೆ.

- Advertisement -

Latest News

error: Content is protected !!