ಬೆಳ್ತಂಗಡಿ : ಮನೆಯ ಸ್ನಾನಗೃಹದ ಒಳಗಡೆ ಅವಿತಿದ್ದ ಸುಮಾರು 14 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸ್ನೇಕ್ ಅಶೋಕ್ ರಕ್ಷಣೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ಅಳದಂಗಡಿಯ ಕೆದ್ದುವಿನಲ್ಲಿ ನಡೆದಿದೆ.

ಕೆದ್ದು ನಿವಾಸಿ ಗೋಪಾಲಕೃಷ್ಣ ಭಟ್ ಅವರ ಜಿ.ಕೆ.ಫಾರ್ಮ್ಸ್ ಮನೆಯ ಸ್ನಾನ ಗೃಹದಲ್ಲಿ ಅವಿತ್ತಿದ್ದು ಇಂದು ಬೆಳಗ್ಗೆ ಮನೆಯವರು ಮುಖ ತೊಳೆಯಲು ಒಳಗಡೆ ಹೋದಾಗ ಒಳಗಡೆಯಿಂದ ಶಬ್ದ ಕೇಳಿಸಿದ್ದು ಅಂತಕದಿಂದ ಹೊರಗಡೆ ಓಡಿಬಂದಿದ್ದಾರೆ. ನಂತರ ಪರಿಶೀಲನೆ ನಡೆಸಿದಾಗ ಕಾಳಿಂಗ ಸರ್ಪ ಕಂಡಿದೆ ತಕ್ಷಣ ಲಾಯಿಲ ಸ್ನೇಕ್ ಅಶೋಕ್ ಅವರಿಗೆ ಕರೆ ಮಾಡಿ ಮಾಹಿತಿ ತಿಳಿಸಿ ಮನೆಗೆ ಕರೆಸಿದ್ದಾರೆ.

ಮನೆಗೆ ಹೋಗಿ ಬಾಗಿಲಿನಲ್ಲಿ ನಿಂತು ಕಾಳಿಂಗದ ಬಾಲದ ಮೂಲಕ ಹಿಡಿಯಲು ಯತ್ನಿಸಿದಾಗ ಸ್ನೇಕ್ ಅಶೋಕ್ ಮೇಲೆಯೆ ಹೊರಗಡೆ ಒಮ್ಮೆಲೇ ಬಂದು 3.5 ಅಡಿ ಎತ್ತರಕ್ಕೆ ಎದ್ದು ನಿಂತು ದಾಳಿಗೆ ಮುಂದಾಯಿತು, ಒಂದು ಕ್ಷಣ ಸ್ನೇಕ್ ಅಶೋಕ್ ಕೂಡ ಗಾಬರಿಗೊಂಡಿದ್ದು ತನ್ನಲ್ಲಿದ್ದ ರಕ್ಷಣಾ ಕೋಲು ಬಿಸಾಕಿ ಹಿಂದಕ್ಕೆ ಸರಿದು ಪ್ರಾಣ ರಕ್ಷಿಸಿಕೊಂಡಿದ್ದಾರೆ.

ನಂತರ ಕಾಳಿಂಗವನ್ನು ಹೊರಗಡೆ ತಂದು ಗೋಣಿಚೀಲಕ್ಕೆ ಹಾಕಿ ರಕ್ಷಣೆ ಮಾಡಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಘಟನೆಯ ವಿಡಿಯೋ ಕ್ಯಾಮರದಲ್ಲಿ ಸೆರೆಯಾಗಿದೆ.