Saturday, May 4, 2024
Homeಮಹಾನ್ಯೂಸ್ಮಹಾರಾಷ್ಟ್ರದಲ್ಲಿ ಶೀಘ್ರವೇ ವ್ಯಾಪಾರ ಚಟುವಟಿಕೆಗಳು ಆರಂಭ: ಸಿಎಂ ಉದ್ಧವ್ ಠಾಕ್ರೆ

ಮಹಾರಾಷ್ಟ್ರದಲ್ಲಿ ಶೀಘ್ರವೇ ವ್ಯಾಪಾರ ಚಟುವಟಿಕೆಗಳು ಆರಂಭ: ಸಿಎಂ ಉದ್ಧವ್ ಠಾಕ್ರೆ

spot_img
- Advertisement -
- Advertisement -

ಮುಂಬೈ : ಮಹಾರಾಷ್ಟ್ರದಲ್ಲಿ ಮಾರಕ ಕೊರೊನಾ ವೈರಸ್ ತಲ್ಲಣ ಸೃಷ್ಟಿಸಿದ್ದು, ದಿನೇ ದಿನೇ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಮತ್ತೊಂದೆಡೆ ಆರ್ಥಿಕ ಚಟುವಟಿಕೆಗಳು ನಿಂತು ಹೋಗಿದ್ದು, ವಲಸೆ ಕಾರ್ಮಿಕರ ಸ್ಥಿತಿ ಶೋಚನೀಯವಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಉದ್ಧವ್ ಠಾಕ್ರೆ ಶೀಘ್ರವೇ ಆರ್ಥಿಕ ಚಟುವಟಿಕೆಗಳು ಶುರುವಾಗಲಿದೆ ಎಂದು ವಲಸೆ ಕಾರ್ಮಿಕರಿಗೆ ಅಭಯ ನೀಡಿ ಧೈರ್ಯ ತುಂಬಿದ್ದಾರೆ.

ಈ ಕುರಿತಂತೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸುದ್ದಿಗೋಷ್ಟಿ ನಡೆಸಿದ ಸಿಎಂ ಉದ್ಧವ್ ಠಾಕ್ರೆ, ನಾಳೆಯ ಬಳಿಕ ರಾಜ್ಯದಲ್ಲಿ ಆರ್ಥಿಕ ಚಟುವಟಿಕೆಗಳು ಪ್ರಾರಂಭವಾಗಲಿದೆ. ಕೊರೊನಾ ಹಿನ್ನಲೆಯಲ್ಲಿ ಆರ್ಥಿಕ ಚಟುವಟಿಕೆಗಳು ಸ್ತಬ್ಧಗೊಂಡಿರುವ ಕಾರಣ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ಹೀಗಾಗಿ ನಾಳೆಯ ಬಳಿಕ ಕೆಲ ನಿರ್ದಿಷ್ಟ ಪ್ರದೇಶಗಳಲ್ಲಿ ಸೀಮಿತವಾಗಿ ವಾಣಿಜ್ಯ ಚಟುವಟಿಕೆಗಳು ಆರಂಭವಾಗಲಿವೆ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ, ರಾಜ್ಯದ ಕೆಲ ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗದಿರುವುದು ಸಮಾಧಾನಕರ ಸಂಗತಿ ಎಂದರು. ಸದ್ಯ ಎದುರಾಗಿರುವ ಪರಿಸ್ಥಿತಿ ಕುರಿತು ಈಗಾಗಲೇ ಕೇಂದ್ರ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಶೀಘ್ರವೇ ಈ ಕುರಿತಂತೆ ಕೇಂದ್ರ ಪರಿಹಾರ ನೀಡಲಿದ್ದು, ಸಧ್ಯದಲ್ಲೇ ಮಹಾರಾಷ್ಟ್ರದಲ್ಲಿ ಆರ್ಥಿಕ, ವಾಣಿಜ್ಯ ಸೇವೆ ಪ್ರಾರಂಭವಾಗಲಿದ್ದು, ವಲಸೆ ಕಾರ್ಮಿಕರಿಗೆ ಇದರಿಂದ ಅನುಕೂಲವಾಗಲಿದೆ ಎಂದರು.

ಇನ್ನು ಕೊರೊನಾ ಪರಿಸ್ಥಿತಿ ಕೊನೆಗೊಳ್ಳಲಿದ್ದು, ಆ ಬಳಿಕ ನೀವು ಸಂತಸದಿಂದ ಹಾಗೂ ಯಾವುದೇ ಆತಂಕವಿಲ್ಲದೇ ನಿಮ್ಮ ರಾಜ್ಯಗಳಿಗೆ, ಮನೆಗಳಿಹೆ ತೆರಳಬೇಕೆಂದು ನನ್ನ ಆಶಯ ಎಂದು ಉದ್ಧವ್ ಠಾಕ್ರೆ ವಲಸೆ ಕಾರ್ಮಿಕರಿಗೆ ಅಭಯ ನೀಡಿದರು. ರಾಜ್ಯದಲ್ಲಿ ಈವರೆಗೆ 66 ಸಾವಿರ ಮಂದಿಯನ್ನು ವೈದ್ಯಕೀಯ ತಪಾಸಣೆಗೆ ಗುರಿಪಡಿಸಿದ್ದು, ಈ ಪೈಕಿ ಶೇ.95ರಷ್ಟು ಮಂದಿಯ ವರದಿ ನೆಗೆಟಿವ್ ಬಂದಿದೆ. ಈವರೆಗೆ 3600 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದು, ಈ ಪೈಕಿ 350 ಮಂದಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ. 52 ಮಂದಿಯ ರೋಗಿಗಳ ಸ್ಥಿತಿ ಗಂಭೀರವಾಗಿದ್ದು, ಇವರನ್ನು ರಕ್ಷಿಸಲು ಅವಿರತ ಪ್ರಯತ್ನ ನಡೆದಿದೆ ಎಂದು ಮಾಹಿತಿ ನೀಡಿದರು

- Advertisement -
spot_img

Latest News

error: Content is protected !!