ನವದೆಹಲಿ: ದೇಶಾದ್ಯಂತ ಇಲ್ಲಿವರೆಗೆ ಹಲವಾರು ಕೊರೋನಾ ವೈರಸ್ ಗೆ ಬಲಿಯಾಗಿದ್ದಾರೆ. ಅವರಲ್ಲಿ ೬೦ ವರ್ಷ ಮೇಲ್ಪಟ್ಟವರೇ ಹೆಚ್ಚು. ಆದರೆ ದೇಶದಲ್ಲಿ ಇಂದು ಹೃದಯ ವಿದ್ರಾವಕ ಘಟನೆ ನಡೆದಿದೆ. 45 ದಿನದ ಪುಟ್ಟ ಮಗುವೊಂದು ಇಂದು ಕೋವಿಡ್ 19 ಸೋಂಕಿನಿಂದ ಸಾವನ್ನಪ್ಪಿರುವ ಘಟನೆ ನವದೆಹಲಿಯ ಆಸ್ಪತ್ರೆಯಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಏಪ್ರಿಲ್ 14ರಂದು ದೆಹಲಿಯ ಕಲಾವತಿ ಸಾರನ್ ಮಕ್ಕಳ ಆಸ್ಪತ್ರೆಗೆ ಮಗುವನ್ನು ದಾಖಲಿಸಲಾಗಿತ್ತು. ಏಪ್ರಿಲ್ 16ರಂದು ಮಗುವಿಗೆ ಕೋವಿಡ್ 19 ವೈರಸ್ ತಗುಲಿರುವುದು ವರದಿಯಲ್ಲಿ ದೃಢಪಟ್ಟಿತ್ತು. ಇದೀಗ ಮಗು ಸಾವನ್ನಪ್ಪುವ ಮೂಲಕ ದೇಶದಲ್ಲಿ ಕೊರೋನ ವೈರಸ್ ಗೆ ಮಗು ಸಾವನ್ನಪ್ಪಿರುವ ಮೊದಲ ಪ್ರಕರಣ ವರದಿಯಾಗಿದೆ.
ದೇಶಾದ್ಯಂತ ಹಲವು ನವಜಾತ ಶಿಶುಗಳನ್ನು ಪರೀಕ್ಷಿಸಿದ್ದು, ಪಾಸಿಟಿವ್ ವರದಿ ಬಂದಿರುವುದಾಗಿ ಹೇಳಿದೆ. ಇಂದು ರಾಜಸ್ಥಾನದಲ್ಲಿ ಎಂಟು ದಿನದ ಮಗುವಿಗೆ ಸೋಂಕು ತಗುಲಿರುವುದು ಪತ್ತೆಯಾಗಿತ್ತು. ಏ.19ರಂದು ಮಹಾರಾಷ್ಟ್ರದ ಪಾಲ್ಗಾಡ್ ಜಿಲ್ಲೆಯ ವಸೈ ವಿರಾರ್ ಮುನ್ಸಿಪಲ್ ವ್ಯಾಪ್ತಿಯಲ್ಲಿ 8 ದಿನದ ಮಗುವಿಗೆ , ಕೋಲ್ಕತಾದಲ್ಲಿ ಮಗುವಿಗೆ ಕೋವಿಡ್ ಪಾಸಿಟಿವ್ ವರದಿ ಬಂದಿರುವ ವರದಿಯಾಗಿದೆ.