ನವದೆಹಲಿ : ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಬರಾಮುಲ್ಲಾ ಬಳಿ ನಡೆದ ಭಯೋತ್ಪಾದಕರ ದಾಳಿಯ ವೇಳೆ ಸಿ.ಆರ್.ಪಿ.ಎಫ್ ನ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಗುಂಡಿನ ದಾಳಿಯಲ್ಲಿ ಇಬ್ಬರು ಯೋಧರು ಗಾಯಗೊಂಡಿದ್ದಾರೆ.
ಭಯೋತ್ಪಾದಕರು ಸಿಆರ್ಪಿಎಫ್ನ 179ನೇ ಬೆಟಾಲಿಯನ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಚೆಕ್ಪೋಸ್ಟ್ ಬಳಿ ಗುಂಡಿನ ದಾಳಿ ನಡೆಸಿದ್ದಾರೆ. ಶ್ರೀನಗರದಿಂದ 50 ಕಿ.ಮೀ.ದೂರ ಇರುವ ಸೋಪೋರ್ನ ಅಹಬ್ ಸಹಬ್ ಬೈಪಾಸ್ನಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಉಗ್ರರ ಹುಟ್ಟಡಗಿಸಲು ಸೇನಾ ಪಡೆ ಕಾರ್ಯಪ್ರವೃತ್ತರಾಗಿದ್ದು, ಸ್ಥಳದಲ್ಲಿ ಜಮಾಯಿಸಿ ಶೋಧ ಕಾರ್ಯವನ್ನು ಬಿರುಸುಗೊಳಿಸಿದರು. ಈ ವೇಳೆ, ಗುಂಡಿನ ಕಾಳಗ ನಡೆದಿದ್ದು, ಮೂವರು ಯೋಧರು ಬಲಿಯಾಗಿದ್ದಾರೆ. ಕಳೆದ ಒಂದು ವಾರದಿಂದ ಕಾಶ್ಮೀರ ಕಣಿವೆಯಲ್ಲಿ ಪ್ಯಾರಾ ಮಿಲಿಟರಿ ಮೇಲೆ ನಡೆದ ಮೂರನೇ ದಾಳಿಯಾಗಿದೆ. ಇಂದಿನ ಉಗ್ರರ ಗುಂಡಿಗೆ ಹುತಾತ್ಮರಾದ ಯೋಧರನ್ನು ಬಿಹಾರ ಮೂಲದ ಕಾನ್ಸ್ ಟೇಬಲ್ ರಾಜೀವ್ ಶರ್ಮ, ಮಹಾರಾಷ್ಟ್ರ ಮೂಲದ ಸಿ.ಬಿ.ಬಕರೇ ಹಾಗೂ ಗುಜರಾತ್ ಮೂಲದ ಪರಮ ಸತ್ಯಪಾಲ್ ಎಂದು ಗುರುತಿಸಲಾಗಿದೆ.
ಇನ್ನು ನಿನ್ನೆ ನಡೆದ ಸೋಪೋರ್ ಉಗ್ರರ ದಾಳಿಯಲ್ಲಿ ಬಲಿಯಾದ ಮೂವರು ಸಿಆರ್ ಪಿಎಫ್ ಯೋಧರಿಗೆ ಇನ್ನು ಸೇನಾ ಗೌರವ ಸಲ್ಲಿಸಲಾಯಿತು.