ಧರ್ಮಸ್ಥಳ: ಇಲ್ಲಿನ ಕೋಲ್ಪೆ ವಾಸುಶೆಟ್ಟಿಯವರ ಮನೆಯಲ್ಲಿ ಇಂದು ಸಂಜೆ ನಾಗರಹಾವೊಂದು ಮನೆಯಲ್ಲಿ ಸೇರಿಕೊಂಡು ಗಾಬರಿ ಉಂಟು ಮಾಡಿತು. ಎಷ್ಟು ಪ್ರಯತ್ನ ಪಟ್ಟರೂ ಹೊರಬರದೆ ಸತಾಯಿಸಿದ ನಾಗರಹಾವನ್ನು ಇಲ್ಲಿನ ಸ್ನೇಕ್ ಪ್ರಕಾಶ್ ಅವರು ಸತತ ಎರಡು ಗಂಟೆಗಳ ಕಾರ್ಯಾಚರಣೆ ನಡೆಸಿ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟರು.
ಬೆಳ್ತಂಗಡಿ ತಾಲೂಕು ಹಾಗೂ ಇತರ ಸ್ಥಳೀಯ ಪ್ರದೇಶಗಳಲ್ಲಿ ಚಿರಪರಿಚಿತರಾಗಿರುವ ಸ್ನೇಕ್ ಪ್ರಕಾಶ್ ಅವರ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ. ಹಾವು ಹಿಡಿಯುವ ಕಲೆಯನ್ನು ಕರಗತ ಮಾಡಿಕೊಂಡಿರುವ ಇವರು ವೃತ್ತಿಯಲ್ಲಿ ಅಟೋಚಾಲಕರು. ಜನರ ಸುರಕ್ಷತೆಗೆ ಯಾವುದೇ ಹಣದ ಅಪೇಕ್ಷೆ ಇಲ್ಲದೆ ಇವರು ಮಾಡುವ ಈ ಕಾರ್ಯ ನಿಜಕ್ಕೂ ಪ್ರಶಂಶನೀಯ.
ಸ್ನೇಕ್ ಪ್ರಕಾಶ್ ಹೇಳುವ ಪ್ರಕಾರ ಆಹಾರದ ಕೊರತೆ ಮತ್ತು ನೀರಿನ ಆಸರೆಗಾಗಿ ಬರುವ ಹಾವುಗಳು ತಪ್ಪಿ ಮನೆಯೊಳಗೆ ಸೇರಿಕೊಂಡಾಗ ಅವಕ್ಕೆ ಗಾಬರಿಯಾಗಿ ಬಿಡುತ್ತದೆ. ಸಾರ್ವಜನಿಕರು ಹೊಡೆದು ನೋವು ಮಾಡಿ ಸಾಯಿಸುವ ಬದಲು ಅವನ್ನು ಸುರಕ್ಷಿತವಾಗಿ ಕಾಡಿಗೆ ಬಿಡುವ ವ್ಯವಸ್ಥೆ ಮಾಡಬೇಕು ಎಂದು ಅವರು ಹೇಳಿದರು.


