
ಉಪ್ಪಿನಂಗಡಿ: ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚರಿಸುವ ವಾಹನ ಸವಾರರಿಗೆ ಮತ್ತೊಂದು ಟೋಲ್ ಶುಲ್ಕ ವಿಧಿಸಲಾಗುತ್ತಿದೆ.
ಬಿ.ಸಿ.ರೋಡ್–ಅಡ್ಡಹೊಳೆ ನಡುವಿನ ನಾಲ್ಕು ಪಥದ ರಸ್ತೆಯ ವಳಾಲು–ನೀರಕಟ್ಟೆ ಬಳಿ ನಿರ್ಮಿಸಿರುವ ಟೋಲ್ ಪ್ಲಾಝಾದಲ್ಲಿ ನವೆಂಬರ್ 26ರಿಂದ ಶುಲ್ಕ ವಸೂಲಿ ಆರಂಭವಾಗಿದ್ದು, ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕೃತ ಮಾಹಿತಿ ನೀಡಿದೆ. ಉಪ್ಪಿನಂಗಡಿಯಿಂದ ಸುಮಾರು 8 ಕಿ.ಮೀ. ದೂರದಲ್ಲಿ ಈ ಟೋಲ್ ಪ್ಲಾಝಾ ನಿರ್ಮಿಸಲಾಗಿದೆ. ಇನ್ನು ಮುಂದೆ ಬಿ.ಸಿ.ರೋಡ್ನಿಂದ ಅಡ್ಡಹೊಳೆ, ಹಾಸನ ಮತ್ತು ಬೆಂಗಳೂರು ಕಡೆಗೆ ಪ್ರಯಾಣಿಸುವ ವಾಹನಗಳು ಇಲ್ಲಿ ಟೋಲ್ ಪಾವತಿಸಬೇಕಾಗುತ್ತದೆ.
ಕಾರುಗಳಿಗೆ 140 ರೂ. ಶುಲ್ಕ; ಹೊಸ ಟೋಲ್ನಲ್ಲಿ ಕಾರು ಮತ್ತು ವ್ಯಾನ್ಗಳಿಗೆ ಏಕಮುಖ ಪ್ರಯಾಣಕ್ಕೆ 140 ರೂ. ಹಾಗೂ 24 ಗಂಟೆಯೊಳಗೆ ಹಿಂದಿರುಗಿದರೆ 205 ರೂ. ಶುಲ್ಕ ಪಾವತಿಸಬೇಕು. ಲಘು ವಾಣಿಜ್ಯ ವಾಹನಗಳಿಗೆ 220 ರೂ., ಬಸ್ ಮತ್ತು ಟ್ರಕ್ಗಳಿಗೆ 465 ರೂ.ನಿಂದ ಟೋಲ್ ಶುಲ್ಕ ಆರಂಭವಾಗುತ್ತದೆ. ದೊಡ್ಡ ವಾಹನಗಳಿಗೆ ಅವುಗಳ ವರ್ಗಕ್ಕೆ ಅನುಗುಣವಾಗಿ 890 ರೂ.ವರೆಗೆ ಶುಲ್ಕ ನಿಗದಿಪಡಿಸಲಾಗಿದೆ.
ಸ್ಥಳೀಯರಿಗೆ ರಿಯಾಯಿತಿ; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೋಂದಣಿಯಾಗಿರುವ ವಾಣಿಜ್ಯ ವಾಹನಗಳಿಗೆ ಶೇ. 50ರಷ್ಟು ರಿಯಾಯಿತಿ ನೀಡಲಾಗುತ್ತದೆ. 50 ಏಕಮುಖ ಪ್ರಯಾಣಗಳ ಮಾಸಿಕ ಪಾಸ್ ಖರೀದಿಸುವವರಿಗೂ ರಿಯಾಯಿತಿ ಸಿಗಲಿದೆ. ಟೋಲ್ ಪ್ಲಾಝಾದಿಂದ 20 ಕಿ.ಮೀ. ವ್ಯಾಪ್ತಿಯಲ್ಲಿ ವಾಸಿಸುವ ಖಾಸಗಿ ಕಾರು ಮಾಲೀಕರಿಗೆ ತಿಂಗಳಿಗೆ 360 ರೂ. ಪಾವತಿಸಿ ಮಾಸಿಕ ಪಾಸ್ ಪಡೆಯಬಹುದು. 1,500 ರೂ. ಪಾವತಿಸಿ ವಾರ್ಷಿಕ ಪಾಸ್ ಪಡೆಯುವ ಅವಕಾಶವೂ ಇದೆ ಎಂದು NHAI ತಿಳಿಸಿದೆ.


