
ಮನೆಯಲ್ಲಿ ತಯಾರಿಸಿದ ನೂಡಲ್ಸ್ ಸೇವಿಸಿದ 7 ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿದ್ದು, ಆಕೆಯ ಅಕ್ಕ ಅಸ್ವಸ್ಥಗೊಂಡಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಇದು ಆಹಾರ ವಿಷಬಾಧೆಯಿಂದ ಸಂಭವಿಸಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಪಿಹು ಕುಮಾವತ್ ಮತ್ತು ದಿವ್ಯಾಂಶಿ ಎಂಬ ಇಬ್ಬರು ಸಹೋದರಿಯರು ತಾವೇ ನೂಡಲ್ಸ್ ತಯಾರಿಸಿ ಸೇವಿಸಿದ್ದರು. ಬಳಿಕ ಇಬ್ಬರೂ ಮಲಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಧ್ಯಾಹ್ನ ತಾಯಿ ಮನೆಗೆ ಬಂದಾಗ ಹಿರಿಯ ಮಗಳು ದಿವ್ಯಾಂಶಿ ಅಸ್ವಸ್ಥಳಾಗಿರುವುದು ಕಂಡುಬಂದಿದೆ. ಆದರೆ, ಕಿರಿಯ ಮಗಳು ಪಿಹು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು. ತಕ್ಷಣವೇ ಇಬ್ಬರನ್ನೂ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ಪಿಹು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಚಿಕಿತ್ಸೆಯಿಂದ ಚೇತರಿಸಿಕೊಂಡ ದಿವ್ಯಾಂಶಿಯನ್ನು ನವೆಂಬರ್ 20ರಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಆಹಾರ ವಿಷಬಾಧೆಯ ಶಂಕೆ ವ್ಯಕ್ತವಾಗಿದ್ದರೂ, ಬಾಲಕಿಯ ಸಾವಿಗೆ ನಿಖರ ಕಾರಣ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ತಿಳಿಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಸಂಬಂಧ ಮೃತ ಬಾಲಕಿಯ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕರ್ಧಾನಿ ಪೊಲೀಸರು, ಮನೆಯಲ್ಲಿ ತಯಾರಿಸಿದ್ದ ನೂಡಲ್ಸ್ನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಇದೇ ವೇಳೆ, ಮೃತ ಬಾಲಕಿಯ ಸಹೋದರ ಗೋವಿಂದ್ ಕೂಡ ಅನಾರೋಗ್ಯದಿಂದ ಬಳಲುತ್ತಿದ್ದು, ಕಳೆದ ಎರಡು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


