
ಮಂಗಳೂರು: ಕಡಲೆಕಾಯಿ ಎಣ್ಣೆಗೆ ‘ಕೋಲ್ಡ್ ಪ್ರೆಸ್ಡ್’ ಎಂದು ಸುಳ್ಳು ಲೇಬಲ್ ಅಂಟಿಸಿ ಮಾರಾಟ ಮಾಡುತ್ತಿದ್ದ ಪ್ರಕರಣ ಮಂಗಳೂರಿನ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ‘ಬೋಲಾಸ್ ಆಗ್ರೋ ಪ್ರೈವೇಟ್ ಲಿಮಿಟೆಡ್’ ಆಹಾರ ಉತ್ಪನ್ನ ಘಟಕದ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿ, ಒಟ್ಟು 1,240 ಕೆ.ಜಿ. ಅಡುಗೆ ಎಣ್ಣೆಯನ್ನು ವಶಪಡಿಸಿಕೊಂಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಿಂದ ಕಚ್ಚಾ ಕಡಲೆಕಾಯಿ ಎಣ್ಣೆಯನ್ನು ತರಿಸಿಕೊಂಡು, ಅದನ್ನು ‘ಕೋಲ್ಡ್ ಪ್ರೆಸ್ಡ್ ಕಡಲೆಕಾಯಿ ಎಣ್ಣೆ’ ಎಂದು ತಪ್ಪು ಲೇಬಲ್ ಹಾಕಿ ಮರುಪ್ಯಾಕ್ ಮಾಡಿ ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಘಟಕದ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಲೇಬಲಿಂಗ್ ಮತ್ತು ಬ್ರ್ಯಾಂಡಿಂಗ್ ಪ್ರಕ್ರಿಯೆಯಲ್ಲಿ ಹಲವು ಗಂಭೀರ ಲೋಪಗಳು ಕಂಡುಬಂದಿವೆ.
ದಾಳಿಯ ವೇಳೆ ತಲಾ 10 ಕೆ.ಜಿ. ತೂಕದ 11 ಕಡಲೆಕಾಯಿ ಎಣ್ಣೆ ಬಾಕ್ಸ್ಗಳು, ತಲಾ 35 ಲೀಟರ್ನ 30 ಕಡಲೆಕಾಯಿ ಎಣ್ಣೆ ಕ್ಯಾನ್ಗಳು ಹಾಗೂ ತಲಾ 20 ಕೆ.ಜಿ. ತೂಕದ 4 ತೆಂಗಿನ ಎಣ್ಣೆ ಬಾಕ್ಸ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 1,240 ಕೆ.ಜಿ. ಅಡುಗೆ ಎಣ್ಣೆಯನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.


