
ಕೇರಳ; ಹುದ್ದೆ ಎಷ್ಟೇ ದೊಡ್ಡದಿರಲಿ, ಎದುರಿಗಿರುವವರ ಶಿಸ್ತು ಮತ್ತು ಗೌರವಕ್ಕೆ ಬೆಲೆ ನೀಡುವ ದೊಡ್ಡ ಗುಣವೇ ನಿಜವಾದ ನಾಯಕತ್ವಕ್ಕೆ ಭೂಷಣ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ, ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಸಾರ್ವಜನಿಕ ಸಮಾರಂಭವೊಂದರಲ್ಲಿ ಯುವ ಕೆಡೆಟ್ನ ವಂದನೆಯನ್ನು ಸ್ವೀಕರಿಸಿ, ತಾವೂ ಎದ್ದು ನಿಂತು ಮರು ಗೌರವ (Return Salute) ಸಲ್ಲಿಸಿರುವ ಅಪರೂಪದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ಭಾನುವಾರ (ನ.15) ಎರ್ನಾಕುಲಂ ಟೌನ್ ಹಾಲ್ನಲ್ಲಿ ಆಯೋಜಿಸಲಾಗಿದ್ದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ರಸ್ತೆ ಸುರಕ್ಷತಾ ಅಭಿಯಾನ ‘ಜೀವ–ಸುಯಾತ್ರಾ’ (Jeeva-Suyatra) ಉದ್ಘಾಟನಾ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಈ ಅಭಿಯಾನದ ಬ್ರಾಂಡ್ ರಾಯಭಾರಿಯಾಗಿರುವ ಮಲಯಾಳಂ ಚಿತ್ರರಂಗದ ಖ್ಯಾತ ನಟ ಮಮ್ಮುಟ್ಟಿ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನಡೆದದ್ದೇನು? ಕಾರ್ಯಕ್ರಮದ ವೇಳೆ ಫಾತಿಮಾ ಎಂಬ ಸ್ಟೂಡೆಂಟ್ ಪೊಲೀಸ್ ಕೆಡೆಟ್ (Student Police Cadet) ವೇದಿಕೆಯ ಮೇಲೆ ಬಂದು ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರಿಗೆ ಸಸಿಯೊಂದನ್ನು ನೀಡಿ ಔಪಚಾರಿಕವಾಗಿ ಸೆಲ್ಯೂಟ್ ಅರ್ಪಿಸಿದರು. ಆ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಸಸಿಯನ್ನು ಮೇಜಿನ ಮೇಲಿಡುವಲ್ಲಿ ನಿರತರಾಗಿದ್ದರಿಂದ, ಮೊದಲಿಗೆ ಕೆಡೆಟ್ನ ಸೆಲ್ಯೂಟ್ ಅನ್ನು ಗಮನಿಸಿರಲಿಲ್ಲ.
ಆದರೆ, ಸಸಿ ಇಟ್ಟು ಕುರ್ಚಿಯತ್ತ ತಿರುಗಿದ ಸಿಎಂ ಸತೀಶನ್ ಅವರಿಗೆ, ಕೆಡೆಟ್ ಇನ್ನೂ ಶಿಸ್ತಿನಿಂದ ನಿಂತು ತಮಗೆ ವಂದನೆ ಸಲ್ಲಿಸುತ್ತಿರುವುದು ಕಣ್ಣಿಗೆ ಬಿತ್ತು. ತಕ್ಷಣವೇ ತಮ್ಮ ತಪ್ಪನ್ನು ಅರಿತುಕೊಂಡ ಅವರು, ಕುರ್ಚಿಯಲ್ಲಿ ಕುಳಿತುಕೊಳ್ಳುವ ಬದಲು ತಕ್ಷಣ ಎದ್ದು ನಿಂತು, ಮುಖದಲ್ಲಿ ಮಂದಸ್ಮಿತರಾಗಿ ಕೆಡೆಟ್ಗೆ ಪ್ರತಿಯಾಗಿ ಸೆಲ್ಯೂಟ್ (Return Salute) ಮಾಡಿದರು.
ಮುಖ್ಯಮಂತ್ರಿಗಳ ಈ ಸರಳತೆ ಮತ್ತು ಗೌರವಯುತ ವರ್ತನೆಯನ್ನು ಕಂಡು ಆ ಪುಟ್ಟ ಕೆಡೆಟ್ ಅಷ್ಟೇ ಸಂತಸದಿಂದ ನಗುತ್ತಾ ವೇದಿಕೆಯಿಂದ ತೆರಳಿದರು. ಪಕ್ಕದಲ್ಲೇ ಮೆಗಾಸ್ಟಾರ್ ಮಮ್ಮುಟ್ಟಿ ಕುಳಿತಿದ್ದರೂ, ಸಿಎಂ ಮತ್ತು ಕೆಡೆಟ್ ನಡುವಿನ ಈ ಸರಳ ವಿನಿಮಯದ ವಿಡಿಯೋ ಈಗ ಇಂಟರ್ನೆಟ್ ಲೋಕದಲ್ಲಿ ಸಖತ್ ವೈರಲ್ ಆಗಿದ್ದು, “ಗೌರವ ಎಂಬುದು ಕೇವಲ ಪಡೆಯುವುದಲ್ಲ, ನೀಡುವುದೂ ಹೌದು” ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ.


