Saturday, November 7, 2026
Homeಅಪರಾಧಪ್ರದೀಪ್ ಪೂಜಾರಿ ಆತ್ಮಹತ್ಯೆ ಪ್ರಕರಣ: ಎಸ್‌ಪಿ ವಿರುದ್ಧವೂ ತನಿಖೆಗೆ ಆಗ್ರಹ, ನ. 11ರಂದು ಉಡುಪಿಯಲ್ಲಿ ಬೃಹತ್...

ಪ್ರದೀಪ್ ಪೂಜಾರಿ ಆತ್ಮಹತ್ಯೆ ಪ್ರಕರಣ: ಎಸ್‌ಪಿ ವಿರುದ್ಧವೂ ತನಿಖೆಗೆ ಆಗ್ರಹ, ನ. 11ರಂದು ಉಡುಪಿಯಲ್ಲಿ ಬೃಹತ್ ಹೋರಾಟ

- Advertisement -
- Advertisement -

ಉಡುಪಿ: ಪ್ರದೀಪ್ ಪೂಜಾರಿ ಅವರ ಸಂಶಯಾಸ್ಪದ ಸಾವಿನ ಪ್ರಕರಣ ಹಾಗೂ ತನಿಖೆಯ ನಿರ್ವಹಣೆಯಲ್ಲಿ ಪೊಲೀಸರ ನಿರ್ಲಕ್ಷ್ಯದ ಆರೋಪಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನೂ ತನಿಖೆಗೆ ಒಳಪಡಿಸಬೇಕು. ಎಸ್‌ಐ ಪುನೀತ್ ಅವರನ್ನು ತಕ್ಷಣ ಅಮಾನತುಗೊಳಿಸಬೇಕು ಎಂದು ಹಿಂದೂಪರ ಸಂಘಟನೆಯ ಮುಖಂಡ ಶ್ರೀಕಾಂತ್ ಶೆಟ್ಟಿ ಆಗ್ರಹಿಸಿದ್ದಾರೆ.

ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರದೀಪ್ ಸಾವಿಗೆ ಪೊಲೀಸ್ ಇಲಾಖೆಯೇ ನೇರ ಹೊಣೆ ಎಂದು ಆರೋಪಿಸಿದರು. ತನ್ನ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಎಫ್‌ಐಆರ್ ದಾಖಲಿಸದಿರುವುದು ಹಾಗೂ ಆರೋಪಿಗಳನ್ನು ಪೊಲೀಸರು ರಕ್ಷಿಸುತ್ತಿದ್ದಾರೆ ಎಂಬ ನೋವಿನಿಂದಲೇ ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರಿದರು. ಸ್ಥಳೀಯ ಎಸ್‌ಐ ವಿರುದ್ಧ ಪ್ರಕರಣ ದಾಖಲಿಸದಂತೆ ಒತ್ತಡ ಹೇರಿದವರ ವಿರುದ್ಧವೂ ಹೋರಾಟ ಮುಂದುವರಿಸುವುದಾಗಿ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕರಣದ ಕುರಿತು ನೀಡಿರುವ ಹೇಳಿಕೆಯು ಕುಟುಂಬಸ್ಥರು, ಗ್ರಾಮಸ್ಥರು ಹಾಗೂ ಪ್ರದೀಪ್ ಪರ ನಿಂತಿರುವ ಸಂಘಟನೆಗಳ ಪ್ರಮುಖರಿಗೆ ನೋವುಂಟು ಮಾಡಿದೆ. ಅವರ ಹೇಳಿಕೆ ಏಕಪಕ್ಷೀಯವಾಗಿದ್ದು, ಜೀವ ಕಳೆದುಕೊಂಡ ಯುವಕನ ಸಾವಿನ ಬಗ್ಗೆ ಕನಿಷ್ಠ ಸಂತಾಪವನ್ನೂ ವ್ಯಕ್ತಪಡಿಸಿಲ್ಲ. ಆತನ ಕುಟುಂಬದ ನೋವು ಹಾಗೂ ಆತನ ಮೇಲೆ ನಡೆದಿದೆಯೆನ್ನಲಾದ ಅನೈತಿಕ ಪೊಲೀಸ್ ಗಿರಿಯ ಬಗ್ಗೆಯೂ ಕಾಳಜಿ ತೋರಿಲ್ಲ. ಕೇವಲ ಸಂತ್ರಸ್ತ ಯುವತಿಯ ವಿಚಾರವನ್ನಷ್ಟೇ ಪ್ರಸ್ತಾಪಿಸಿದ್ದಾರೆ ಎಂದು ಟೀಕಿಸಿದರು.

ಎಸ್‌ಐ ಪುನೀತ್ ಅವರನ್ನು ಅಮಾನತುಗೊಳಿಸುವ ಬದಲು ಕಡ್ಡಾಯ ರಜೆಯಲ್ಲಿ ಕಳುಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅವರನ್ನು ಅಮಾನತುಗೊಳಿಸಿದರೆ ಮೇಲಧಿಕಾರಿಗಳಿಗೂ ಸಮಸ್ಯೆಯಾಗಬಹುದು ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆಯೇ ಎಂಬ ಪ್ರಶ್ನೆಯೂ ಮೂಡಿದೆ. ಒಟ್ಟಾರೆ ಜಿಲ್ಲಾ ಪೊಲೀಸ್ ವ್ಯವಸ್ಥೆಯ ಕಾರ್ಯವೈಖರಿಯ ಬಗ್ಗೆಯೇ ಅನುಮಾನ ಮೂಡಿದ್ದು, ಪೊಲೀಸ್ ಇಲಾಖೆಯಿಂದ ನ್ಯಾಯ ದೊರೆಯುವ ವಿಶ್ವಾಸ ಕಡಿಮೆಯಾಗಿದೆ ಎಂದರು.

ಈ ಎಲ್ಲ ವಿಚಾರಗಳನ್ನು ಮುಂದಿಟ್ಟುಕೊಂಡು ನವೆಂಬರ್ 11ರಂದು ಉಡುಪಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಶ್ರೀಕಾಂತ್ ಶೆಟ್ಟಿ ತಿಳಿಸಿದರು.

- Advertisement -

Latest News

error: Content is protected !!