ಮಂಗಳೂರು: ಕೇಕ್ ಹಾಗೂ ಐಸ್ಕ್ರೀಂಗಳಲ್ಲಿ ಆರೋಗ್ಯಕ್ಕೆ ಹಾನಿಕಾರಕವಾದ ಬಣ್ಣಗಳನ್ನು ಬಳಸುವುದನ್ನು ತಡೆಯುವ ಉದ್ದೇಶದಿಂದ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಸುರತ್ಕಲ್ ವ್ಯಾಪ್ತಿಯ ಮಾರಾಟ ಮಳಿಗೆಗಳ ಮೇಲೆ ದಿಢೀರ್ ತಪಾಸಣೆ ನಡೆಸಿದ್ದಾರೆ.
ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಸೂಚನೆಯ ಮೇರೆಗೆ ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಸಿ.ಎಚ್. ನೇತೃತ್ವದ ತಂಡವು ಈ ಪರಿಶೀಲನೆ ನಡೆಸಿತು.
ಕ್ಲೌಡ್ ಕಿಚನ್ ಹಾಗೂ ಸೆಂಟ್ರಲ್ ಕೇಕ್ ತಯಾರಿಕಾ ಘಟಕಗಳಿಂದ ಕೇಕ್ ಮತ್ತು ಐಸ್ಕ್ರೀಂಗಳನ್ನು ಪಡೆದು ಮಾರಾಟ ಮಾಡುತ್ತಿರುವ ರಿಬ್ಬನ್ಸ್ ಅಂಡ್ ಬಲೂನ್ಸ್ ಹಾಗೂ Hive ಫ್ರಾಂಚೈಸಿ ಮಳಿಗೆಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಕೇಕ್ಗಳಲ್ಲಿ ಬಳಸಲಾಗುತ್ತಿರುವ ಬಣ್ಣಗಳ ಗುಣಮಟ್ಟವನ್ನು ಪರೀಕ್ಷಿಸಲು ಪ್ರಯೋಗಾಲಯಕ್ಕೆ ಕಳುಹಿಸುವ ಉದ್ದೇಶದಿಂದ ಮಾದರಿಗಳನ್ನು ಸಂಗ್ರಹಿಸಲಾಯಿತು.
ಕೇಕ್ಗಳು ಆಕರ್ಷಕವಾಗಿ ಕಾಣಬೇಕೆಂಬ ಕಾರಣಕ್ಕೆ ಆರೋಗ್ಯಕ್ಕೆ ಹಾನಿಕಾರಕವಾದ ಬಣ್ಣಗಳನ್ನು ಬಳಸಬಾರದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದರು. ಅಲ್ಲದೆ, ಹಬ್ಬದ ಸಂದರ್ಭಗಳಲ್ಲಿ ತಯಾರಿಸುವ ಸಿಹಿತಿಂಡಿಗಳನ್ನು ಸ್ವಚ್ಛತೆ ಮತ್ತು ಗುಣಮಟ್ಟದ ಮಾನದಂಡಗಳನ್ನು ಪಾಲಿಸಿ ತಯಾರಿಸುವಂತೆ ಸೂಚಿಸಿದರು.


