ಜಾಮ್‌ನಗರ: ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕೇರಳದ ಅನಾಥ ಆನೆಮರಿ ‘ಮಾಯಾ’ಗೆ ಹೊಸ ಬದುಕಿನ ನಿರೀಕ್ಷೆ ಮೂಡಿದೆ. ಸುಮಾರು 130 ಕೆ.ಜಿ. ತೂಕದ ಮಾಯಾಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೇರಳದಿಂದ ಗುಜರಾತ್‌ನ ಜಾಮ್‌ನಗರದಲ್ಲಿರುವ ಅನಂತ್ ಅಂಬಾನಿ ಅವರ ವಂತಾರಾ ಚಿಕಿತ್ಸಾ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ನವೆಂಬರ್ 6ರಂದು ವಿಶೇಷ ವಿಮಾನದ ಮೂಲಕ ಮಾಯಾಳನ್ನು ಜಾಮ್‌ನಗರಕ್ಕೆ ಕರೆತರಲಾಗಿದ್ದು, ತಜ್ಞ ಪಶುವೈದ್ಯರ ತಂಡ ಚಿಕಿತ್ಸೆ ಆರಂಭಿಸಲಿದೆ.
2025ರ ಏಪ್ರಿಲ್‌ನಲ್ಲಿ ಆನೆಗಳ ಹಿಂಡಿನಿಂದ ಬೇರ್ಪಟ್ಟು ಅನಾಥವಾಗಿದ್ದ ಮಾಯಾಳನ್ನು ಅರಣ್ಯ ಸಿಬ್ಬಂದಿ ರಕ್ಷಿಸಿ ಆರೈಕೆ ಮಾಡುತ್ತಿದ್ದರು. ಇತ್ತೀಚೆಗೆ ಮೂಳೆಗಳು ದುರ್ಬಲಗೊಂಡು ಕಾಲುಗಳಲ್ಲಿ ಮುರಿತ ಉಂಟಾಗಿದ್ದರಿಂದ ಆಕೆಗೆ ನಡೆಯಲು ಮತ್ತು ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ.
ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ದಯಾಮರಣಕ್ಕೆ ಶಿಫಾರಸು ಮಾಡಲಾಗಿತ್ತು. ಆದರೆ ತಜ್ಞರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ವಂತಾರಾಗೆ ಕಳುಹಿಸಲಾಗಿದೆ. ಚಿಕಿತ್ಸೆ ಬಳಿಕ ಮಾಯಾ ಮತ್ತೆ ಚೇತರಿಸಿಕೊಂಡು ನಡೆಯುವಂತಾಗಲಿ ಎಂಬ ನಿರೀಕ್ಷೆ ವ್ಯಕ್ತವಾಗಿದೆ.


