
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಫಿಶ್ ಫ್ಯಾಕ್ಟರಿಯೊಂದರಲ್ಲಿ ಅಕ್ಕ ಪಡೆ ತಂಡ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಶಾಲೆಯಿಂದ ದೂರ ಉಳಿದಿದ್ದ 30 ಮಕ್ಕಳು ಪತ್ತೆಯಾಗಿದ್ದಾರೆ.
ನವೆಂಬರ್ 3ರಂದು ಸಿಆರ್‌ಪಿ ಹಾಗೂ ಇಸಿಒ ಇಲಾಖೆಗಳ ಸಹಯೋಗದೊಂದಿಗೆ ಈ ಕಾರ್ಯಾಚರಣೆ ನಡೆಸಲಾಗಿದ್ದು, ಕಾರ್ಮಿಕರ ಮಕ್ಕಳು ಶಾಲೆಗೆ ತೆರಳದೆ ಫ್ಯಾಕ್ಟರಿಯ ಸುತ್ತಮುತ್ತ ಕಾಲ ಕಳೆಯುತ್ತಿರುವುದು ಬೆಳಕಿಗೆ ಬಂದಿದೆ. ಪತ್ತೆಯಾದ ಮಕ್ಕಳಲ್ಲಿ 7 ಬಾಲಕಿಯರು ಹಾಗೂ 23 ಬಾಲಕರಿದ್ದಾರೆ. ಎಲ್ಲ ಮಕ್ಕಳನ್ನೂ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಗಿದೆ.
ಮಕ್ಕಳ ಸುರಕ್ಷತೆ ಮತ್ತು ಆರೈಕೆಯ ದೃಷ್ಟಿಯಿಂದ 7 ಬಾಲಕಿಯರನ್ನು ಬಾಲಕಿಯರ ಬಾಲಮಂದಿರಕ್ಕೆ ಹಾಗೂ 23 ಬಾಲಕರನ್ನು ಬಾಲಕರ ಬಾಲಮಂದಿರಕ್ಕೆ ದಾಖಲಿಸುವ ಕ್ರಮ ಕೈಗೊಳ್ಳಲಾಗಿದೆ.
ಶಾಲೆಗೆ ಹೋಗಿ ವಿದ್ಯಾಭ್ಯಾಸ ಮಾಡಬೇಕಾದ ಎಳೆಯ ಮಕ್ಕಳು ಶಿಕ್ಷಣದಿಂದ ವಂಚಿತರಾಗಿರುವುದು ಕಳವಳಕ್ಕೆ ಕಾರಣವಾಗಿದೆ. ಪ್ರತಿಯೊಂದು ಮಗುವಿಗೂ ಶಿಕ್ಷಣ, ರಕ್ಷಣೆ ಹಾಗೂ ಸುರಕ್ಷಿತ ಬಾಲ್ಯ ದೊರೆಯುವುದು ಅತ್ಯಗತ್ಯ.


