ಅರಂತೋಡು: ಸಂಪಾಜೆ ಗ್ರಾಮದ ಕೀಲಾರು, ಕೀಲಾರುಮೂಲೆ, ಕೈಪಡ್ಕ ಮತ್ತು ನೆಲ್ಲಿಕುಮೇರಿ ಪ್ರದೇಶಗಳಲ್ಲಿ ಕಳೆದ ಮೂರು ದಿನಗಳಿಂದ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಾಡಾನೆಗಳು ಕೃಷಿ ತೋಟಗಳಿಗೆ ನುಗ್ಗಿ ತೆಂಗು, ಬಾಳೆ ಸೇರಿದಂತೆ ವಿವಿಧ ಬೆಳೆಗಳನ್ನು ನಾಶಪಡಿಸಿವೆ. ಕಲ್ಲುಗುಂಡಿಯ ಶ್ರೀ ಮುತ್ತುಮಾರಿಯಮ್ಮ ದೇವಸ್ಥಾನದ ಕಾಂಪೌಂಡ್ಗೂ ಹಾನಿ ಮಾಡಿವೆ. ಅ.18ರ ಬೆಳಗ್ಗೆಯೂ ಕಾಡಾನೆಗಳು ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.
ಕೃಷಿ ಬೆಳೆಗಳಿಗೆ ನಿರಂತರ ಹಾನಿಯಾಗುತ್ತಿರುವುದರಿಂದ ರೈತರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಜನವಸತಿ ಪ್ರದೇಶಗಳ ಸಮೀಪವೇ ಕಾಡಾನೆಗಳು ಸಂಚರಿಸುತ್ತಿರುವುದರಿಂದ ಜನರಲ್ಲಿಯೂ ಭಯದ ವಾತಾವರಣ ನಿರ್ಮಾಣವಾಗಿದೆ.
ಅರಣ್ಯ ಇಲಾಖೆಯ ಕ್ರಮಕ್ಕೆ ಆಗ್ರಹ
ಕಾಡಾನೆಗಳ ಹಾವಳಿಯನ್ನು ತಡೆಯಲು ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು. ಜನರ ಸುರಕ್ಷತೆಗೆ ಆದ್ಯತೆ ನೀಡುವುದರ ಜತೆಗೆ, ಬೆಳೆ ನಷ್ಟ ಅನುಭವಿಸಿದ ಕೃಷಿಕರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.


