ಪಡಿತರ ಚೀಟಿದಾರರು ಇ-ಕೆವೈಸಿ ದೃಢೀಕರಣ ಮಾಡಿಸಲು ನೀಡಿದ್ದ ಗಡುವನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ನವೆಂಬರ್ 10ರವರೆಗೆ ವಿಸ್ತರಿಸಿದೆ. ಈ ಮೊದಲು ಅಕ್ಟೋಬರ್ 20 ಕೊನೆಯ ದಿನವಾಗಿತ್ತು.
ಒಂದು ವರ್ಷಕ್ಕೂ ಹಿಂದೆ ಇ-ಕೆವೈಸಿ ಮಾಡಿಸಿರುವ 1.15 ಕೋಟಿಗೂ ಹೆಚ್ಚು ಫಲಾನುಭವಿಗಳು ಮತ್ತೊಮ್ಮೆ ದೃಢೀಕರಣ ಮಾಡಿಸಬೇಕಿದೆ. ಇದುವರೆಗೆ ಇ-ಕೆವೈಸಿ ಮಾಡಿಸದ 3,82,362 ಹಾಗೂ ಐದು ವರ್ಷಕ್ಕೂ ಹಿಂದೆ ಇ-ಕೆವೈಸಿ ಮಾಡಿಸಿರುವ 54.27 ಲಕ್ಷ ಫಲಾನುಭವಿಗಳೂ ದೃಢೀಕರಣ ಬಾಕಿ ಉಳಿಸಿಕೊಂಡಿದ್ದಾರೆ. ಫಲಾನುಭವಿಗಳು ‘ಅನ್ನ ಸೇವೆ’ ಮೊಬೈಲ್ ಆ್ಯಪ್ ಅಥವಾ ನ್ಯಾಯಬೆಲೆ ಅಂಗಡಿಗಳಲ್ಲಿರುವ ‘AHARA’ ತಂತ್ರಾಂಶದ ಮೂಲಕ ನವೆಂಬರ್ 10ರೊಳಗೆ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕು. ತಪ್ಪಿದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ.
ಹೊರರಾಜ್ಯಗಳಲ್ಲಿ ಕೆಲಸ ಮಾಡುತ್ತಿರುವ ಕರ್ನಾಟಕದ ಪಡಿತರ ಚೀಟಿದಾರರಿಗೆ ಅನುಕೂಲವಾಗುವಂತೆ ‘ಅನ್ನ ಸೇವೆ’ ಆ್ಯಪ್ ಅನ್ನು ದೇಶಾದ್ಯಂತ ಲಭ್ಯವಾಗಿಸಲಾಗಿದೆ. ಫಲಾನುಭವಿಗಳು ತಾವು ಇರುವ ಸ್ಥಳದಿಂದಲೇ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಇ-ಕೆವೈಸಿ ಪೂರ್ಣಗೊಳಿಸಬಹುದು. ಈಗಾಗಲೇ ಆ್ಯಪ್ ಬಳಸುತ್ತಿರುವವರು ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿರುವ ಹೊಸ ಆವೃತ್ತಿಗೆ ಅಪ್ಡೇಟ್ ಮಾಡಿಕೊಳ್ಳಬಹುದು.


