ಬೆಳ್ತಂಗಡಿ : ಭಜನೆಯ ಮೂಲಕ ಮನಸ್ಸುಗಳು ಒಂದಾಗುವುದರೊAದಿಗೆ ನಮ್ಮ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸಲು ಸಾಧ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಅಧ್ಯಕ್ಷರಾದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅ.3 ರಂದು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಆಯೋಜಿಸಲಾದ ೨೮ನೇ ವರ್ಷದ ಭಜನಾ ಕಮ್ಮಟದ ಸಾಧನಾ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
“ಜೀವನದಲ್ಲಿ ಭಜನೆಗೆ ಬಹುದೊಡ್ಡ ಸ್ಥಾನವಿದೆ. ಭಜನೆಯ ಮೂಲಕ ನಮ್ಮ ಮನಸ್ಸು ಒಂದಾಗುತ್ತದೆ. ನಮ್ಮ ಸಂಸ್ಕಾರವನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವಲ್ಲಿ ಭಜನೆ ಮಹತ್ವದ ಪಾತ್ರ ವಹಿಸುತ್ತದೆ. ಪ್ರಶಸ್ತಿ ಎನ್ನುವುದು ಕೇವಲ ಸನ್ಮಾನವಲ್ಲ. ನೀವು ಮಾಡಿದ ಸಾಧನೆಗೆ ಸಮಾಜ ನೀಡುವ ಗೌರವವಾಗಿದೆ. ಅದರೊಂದಿಗೆ ನಿಮ್ಮಿಂದ ಇನ್ನಷ್ಟು ಉತ್ತಮ ಕಾರ್ಯಗಳು ನಡೆಯಬೇಕು ಎಂಬ ಜವಾಬ್ದಾರಿಯನ್ನೂ ಪ್ರಶಸ್ತಿ ನೆನಪಿಸುತ್ತದೆ” ಎಂದು ಹೆಗ್ಗಡೆಯವರು ಅಭಿಪ್ರಾಯಪಟ್ಟರು.ಸಮಾರಂಭದಲ್ಲಿ ವಿವಿಧ ತಾಲೂಕುಗಳ ಆಯ್ದ ೨೪ ಭಜನಾ ಮಂಡಳಿಗಳಿಗೆ ಸಾಧನಾ ಪ್ರಶಸ್ತಿ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಭಗವಂತನ ಮುಂದೆ ಎಲ್ಲರೂ ಭಕ್ತರೇ ಮಾಣಿಲ ಶ್ರೀಗಳು ಆಶೀರ್ವಚನ ನೀಡಿ, “ಭಜನಾ ಕಮ್ಮಟದಲ್ಲಿ ಮಕ್ಕಳು, ಯುವಕರು ಮತ್ತು ಹಿರಿಯರು ಎಲ್ಲರೂ ಒಂದಾಗಿ ಕುಳಿತು ದೇವರ ನಾಮಸ್ಮರಣೆ ಮಾಡುತ್ತಿರುವುದು ಅತ್ಯಂತ ವಿಶೇಷವಾಗಿದೆ. ಇಲ್ಲಿ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ. ಭಗವಂತನ ಮುಂದೆ ಎಲ್ಲರೂ ಭಕ್ತರೇ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪೂಜ್ಯ ಖಾವಂದರನ್ನು ಸೊರಬ ತಾಲೂಕಿನ ೨೭ನೇ ವರ್ಷದ ಭಜನಾ ಕಮ್ಮಟದ ಶಿಬಿರಾರ್ಥಿಗಳು ವಿಶೇಷವಾಗಿ ಗೌರವಿಸಿದರು. ೨೮ನೇ ವರ್ಷದ ಭಜನಾ ಕಮ್ಮಟದಲ್ಲಿ ಭಾಗವಹಿಸಿದ ಎಲ್ಲ ಸಂಪನ್ಮೂಲ ವ್ಯಕ್ತಿಗಳನ್ನೂ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್, ಖ್ಯಾತ ಗಾಯಕ ಶಂಕರ ಶ್ಯಾನಭಾಗ್ ಬೆಂಗಳೂರು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಾದೇಶಿಕ ಭಜನಾ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ್ ಸಾಲ್ಯಾನ್, ಉಪಾಧ್ಯಕ್ಷ ರಾಜೇಂದ್ರ ಬಸ್ರೂರು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.ಭಜನಾ ಕಮ್ಮಟದ ಕಾರ್ಯದರ್ಶಿ ಎ.ವಿ. ಶೆಟ್ಟಿ ಸ್ವಾಗತಿಸಿದರು. ಕೆ.ವಿ. ಬಲ್ಲಾಳ್ ವಂದಿಸಿದರು. ವಿಕಾಸ್ ಆರಿಗ ಕಾರ್ಯಕ್ರಮ ನಿರೂಪಿಸಿದರು. ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಶಿಬಿರಾರ್ಥಿಗಳಿಗೆ ಸಮಾರೋಪ ಸಮಾರಂಭದ ಕುರಿತು ಮಾಹಿತಿ ನೀಡಿದರು.


