ಮಂಗಳೂರು: ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (CPC) ನೇಮಕಾತಿಯ ದೈಹಿಕ ಪರೀಕ್ಷೆಗೆ ಹಾಜರಾಗಲು ಕೃತಕ ಬುದ್ಧಿಮತ್ತೆ (AI) ಹಾಗೂ ಡಿಜಿಟಲ್ ಎಡಿಟಿಂಗ್ ಬಳಸಿ ನಕಲಿ ಪ್ರವೇಶ ಪತ್ರ ಸೃಷ್ಟಿಸಿದ್ದ ಕಡಬ ಮೂಲದ ಯುವಕನನ್ನು ಮಂಗಳೂರಿನ ಬರ್ಕೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಬೆದ್ರಾಜೆ ನಿವಾಸಿ ಯಜ್ಞೇಶ್ ಬಿ.ಜೆ. ರೈ (22) ಬಂಧಿತ ಆರೋಪಿ.
ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ದೈಹಿಕ ಪರೀಕ್ಷೆಯ ವೇಳೆ ಕೆಇಎ (KEA) ತಂತ್ರಾಂಶದಲ್ಲಿ ಪರಿಶೀಲಿಸಿದಾಗ, 1:5 ಅರ್ಹತಾ ಪಟ್ಟಿಯಲ್ಲಿ ಆರೋಪಿಯ ಹೆಸರು ಕಂಡುಬಂದಿರಲಿಲ್ಲ. ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆಯದಿದ್ದರೂ, ದೈಹಿಕ ಪರೀಕ್ಷೆಗೆ ಹಾಜರಾಗುವ ದುರುದ್ದೇಶದಿಂದ ಅರ್ಹತೆ ಪಡೆದಿದ್ದ ಮತ್ತೊಬ್ಬ ಅಭ್ಯರ್ಥಿಯ ಹಾಲ್‌ಟಿಕೆಟ್ ಪಡೆದು, ಎಐ ಬಳಸಿ ತನ್ನ ಹೆಸರಿಗೆ ನಕಲಿ ಪ್ರವೇಶ ಪತ್ರ ಸೃಷ್ಟಿಸಿಕೊಂಡಿರುವುದು ತನಿಖೆಯಲ್ಲಿ ಬಯಲಾಗಿದೆ.
ಆರೋಪಿಯ ಮೊಬೈಲ್ ಪರಿಶೀಲಿಸಿದಾಗ ಎಡಿಟಿಂಗ್ ನಡೆಸಿದ ಡಿಜಿಟಲ್ ಪುರಾವೆಗಳು ಪತ್ತೆಯಾಗಿವೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯ ನೀಡಿದ ದೂರಿನನ್ವಯ ಬರ್ಕೆ ಪೊಲೀಸ್ ಠಾಣೆಯಲ್ಲಿ (ಅ.ಕ್ರ. 87/2026) ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.


