Monday, September 28, 2026
Homeಕರಾವಳಿಮಂಗಳೂರಿನಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಚರ್ಚೆ: KSCA ಅಧ್ಯಕ್ಷರನ್ನು ಭೇಟಿಯಾದ ಮುಡಾ ಅಧ್ಯಕ್ಷ

ಮಂಗಳೂರಿನಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಚರ್ಚೆ: KSCA ಅಧ್ಯಕ್ಷರನ್ನು ಭೇಟಿಯಾದ ಮುಡಾ ಅಧ್ಯಕ್ಷ

- Advertisement -
- Advertisement -

ಮಂಗಳೂರು: ನಗರದಲ್ಲಿ ಸುಸಜ್ಜಿತ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಹಾಗೂ ಪದಾಧಿಕಾರಿಗಳೊಂದಿಗೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಮಹತ್ವದ ಚರ್ಚೆ ನಡೆಸಿದರು.

ಮಂಗಳೂರಿನಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ಆಸಕ್ತಿ ವ್ಯಕ್ತಪಡಿಸಿರುವ ವೆಂಕಟೇಶ್ ಪ್ರಸಾದ್, ಸೂಕ್ತ ಸ್ಥಳ ಗುರುತಿಸುವ ಸಲುವಾಗಿ ಶೀಘ್ರದಲ್ಲೇ ಮಂಗಳೂರಿಗೆ ಭೇಟಿ ನೀಡುವುದಾಗಿ ತಿಳಿಸಿದರು. ಅಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ಯೋಜನೆ ಕುರಿತು ಚರ್ಚಿಸುವುದಾಗಿ ಹೇಳಿದರು.

ಮಂಗಳೂರಿಗೆ ಉತ್ತಮ ಸಂಪರ್ಕ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳಿದ್ದು, ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ನಗರ ಸೂಕ್ತ ಸ್ಥಳವಾಗಿದೆ. ಈ ಅವಕಾಶವನ್ನು ಬಳಸಿಕೊಳ್ಳಲು KSCA ಮುಂದಾಗಿದ್ದು, ಯೋಜನೆಯನ್ನು ಶೀಘ್ರ ಕಾರ್ಯರೂಪಕ್ಕೆ ತರಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ವೆಂಕಟೇಶ್ ಪ್ರಸಾದ್ ತಿಳಿಸಿದರು.

ಕ್ರೀಡಾಂಗಣ ನಿರ್ಮಾಣಕ್ಕಾಗಿ ಈಗಾಗಲೇ ಎರಡು ಸ್ಥಳಗಳನ್ನು ಗುರುತಿಸಲಾಗಿದ್ದು, ಸ್ಥಳ ಪರಿಶೀಲನೆಗೆ ಆಗಮಿಸುವಂತೆ KSCA ಅಧ್ಯಕ್ಷರಿಗೆ ಮುಡಾ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಮನವಿ ಮಾಡಿದರು.

ಸಭೆಯಲ್ಲಿ KSCA ಖಜಾಂಚಿ ಬಿ.ಎನ್. ಮಧುಕರ್, ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಪರಿಣಿತ್, ಅನುಪ್ ಶ್ರೀಧರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

- Advertisement -

Latest News

error: Content is protected !!