ಬಂಟ್ವಾಳ: ತಾಲೂಕಿನ ತುಂಬೆ ಗ್ರಾಮದ ಕೆಳಗಿನ ತುಂಬೆ ಎಂಬಲ್ಲಿ ನದಿ ಕಿನಾರೆಯಿಂದ ಅಕ್ರಮವಾಗಿ ಮರಳು ತೆಗೆದು ಸಾಗಿಸುತ್ತಿದ್ದ ಸ್ಥಳದ ಮೇಲೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಶುಕ್ರವಾರ ಮುಂಜಾನೆ ದಿಢೀರ್ ದಾಳಿ ನಡೆಸಿದ್ದಾರೆ. ದಾಳಿ ವೇಳೆ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಮರಳು ಸಾಗಾಟಕ್ಕೆ ಬಳಸುತ್ತಿದ್ದ ವಾಹನಗಳು ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಲಾಗಿದೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ರನ್ನಗೌಡ ಪಾಟೀಲ ಅವರಿಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಅಕ್ರಮವಾಗಿ ಮರಳು ಲೋಡ್ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಸ್ಥಳದಲ್ಲಿದ್ದ ನಿಹಾನ್, ರಾಜೀಕ್, ಮೊಹಮ್ಮದ್ ಶಂಶೀರ್, ಮಹಮ್ಮದ್ ಅಶ್ರಫ್ ಹಾಗೂ ಸ್ಟೀವನ್ ಡಿಸೋಜಾ ಸೇರಿದಂತೆ ಕೃತ್ಯಕ್ಕೆ ಸಹಕರಿಸಿದ ರೈಟರ್ ಶಿವಪ್ರಸಾದ್ ಆಳ್ವ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ದಾಳಿ ವೇಳೆ ಮರಳು ಲೋಡ್ ಮಾಡಲಾಗಿದ್ದ KA-06-D-8454, KA-19-AF-9094, KA-19-AB-1508 ನೋಂದಣಿ ಸಂಖ್ಯೆಯ 3 ಟಿಪ್ಪರ್ ಲಾರಿಗಳು, KA-20-N-7175 ನೋಂದಣಿಯ 1 ಜೆಸಿಬಿ ಹಾಗೂ ಮರಳು ಲೋಡ್ ಮಾಡಲು ಬಳಸುತ್ತಿದ್ದ ಉಪಕರಣಗಳನ್ನು ಜಪ್ತಿ ಮಾಡಲಾಗಿದೆ. ಸ್ವಾಧೀನಪಡಿಸಿಕೊಂಡ ಸ್ವತ್ತುಗಳ ಒಟ್ಟು ಅಂದಾಜು ಮೌಲ್ಯ 25,24,700 ಶುಲ್ಕ ಎಂದು ಅಂದಾಜಿಸಲಾಗಿದೆ.
ಯಾವುದೇ ಅನುಮತಿ ಇಲ್ಲದೆ ಅಕ್ರಮವಾಗಿ ಮರಳು ಸಂಗ್ರಹಿಸಿ ಸಾಗಿಸುತ್ತಿದ್ದುದು ವಿಚಾರಣೆ ವೇಳೆ ತಿಳಿದುಬಂದಿದೆ. ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಕಾಯ್ದೆ ಹಾಗೂ ಬಿಎನ್‌ಎಸ್ (BNS) ಕಾಯ್ದೆಯಡಿ ಅ.ಕ್ರ: 129/2026 ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


