ನವದೆಹಲಿ : ಸುಪ್ರೀಂ ಕೋರ್ಟ್ ನಿಂದ ಐತಿಹಾಸಿಕ ತೀರ್ಪು ನೀಡಿದ್ದು, ಸೌಜನ್ಯ ಪ್ರಕರಣದ ಮರು ತನಿಖೆಗೆ ಆದೇಶ ನೀಡಿದೆ.
ಹಿಂದೆ ಪ್ರಕರಣದ ತನಿಖೆ ನಡೆಸಿದ್ದ ಅಧಿಕಾರಿಗಳನ್ನು ಹೊಸ ತನಿಖಾ ತಂಡದಿಂದ ದೂರವಿಡುವಂತೆ ಸೂಚಿಸಿರುವ ಸರ್ವೋಚ್ಚ ನ್ಯಾಯಾಲಯ, ತನಿಖಾ ವರದಿಯನ್ನು ತನಗೆ ಸಲ್ಲಿಸಬೇಕೆಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಈ ಆದೇಶದಿಂದಾಗಿ ಶೀಘ್ರದಲ್ಲೇ ವಿಶೇಷ ತನಿಖಾ ತಂಡ (SIT) ರಚನೆಯಾಗುವ ಸಾಧ್ಯತೆಯಿದ್ದು, ನಿಜವಾದ ಅಪರಾಧಿಗಳನ್ನು ಪತ್ತೆ ಹಚ್ಚುವ ನಿರೀಕ್ಷೆ ಮತ್ತೆ ಚಿಗುರಿದೆ.
ಪ್ರಕರಣದ ಹಿನ್ನೆಲೆ:
ಉಜಿರೆಯ ಎಸ್ಡಿಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯ 2012ರ ಅಕ್ಟೋಬರ್ 10ರಂದು ಧರ್ಮಸ್ಥಳದ ಮಣ್ಣಸಂಕದಲ್ಲಿ ಶವವಾಗಿ ಪತ್ತೆಯಾಗಿದ್ದಳು. ಆಕೆಯನ್ನು ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಪೊಲೀಸರು ಸಂತೋಷ್ ರಾವ್ ಎಂಬಾತನನ್ನು ಬಂಧಿಸಿದ್ದರಾದರೂ, ನೈಜ ಅಪರಾಧಿಗಳನ್ನು ರಕ್ಷಿಸಲಾಗುತ್ತಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಜನಾಗ್ರಹಕ್ಕೆ ಮಣಿದು ಪ್ರಕರಣವನ್ನು ಸಿಐಡಿ ಹಾಗೂ ನಂತರ ಸಿಬಿಐಗೆ ವಹಿಸಲಾಗಿತ್ತು. ಸಿಬಿಐ ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಸಂತೋಷ್ ರಾವ್ನನ್ನು ದೋಷಮುಕ್ತಗೊಳಿಸಿ ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಹಾಗೂ ಮರುತನಿಖೆಗೆ ಆಗ್ರಹಿಸಿ ಸೌಜನ್ಯ ತಾಯಿ ಕುಸುಮಾವತಿ ಸಲ್ಲಿಸಿದ್ದ ಅರ್ಜಿಯನ್ನು 2024ರ ಸೆಪ್ಟೆಂಬರ್ನಲ್ಲಿ ಕರ್ನಾಟಕ ಹೈಕೋರ್ಟ್ ವಜಾಗೊಳಿಸಿತ್ತು. ಇದೀಗ ಸುಪ್ರೀಂ ಕೋರ್ಟ್ನ ಈ ಹೊಸ ಆದೇಶವು ಸೌಜನ್ಯ ಕುಟುಂಬಸ್ಥರು ಹಾಗೂ ಸಾರ್ವಜನಿಕರಲ್ಲಿ ನ್ಯಾಯದ ಭರವಸೆಯನ್ನು ಮೂಡಿಸಿದೆ.


