Friday, September 11, 2026
Homeಕರಾವಳಿಮಂಗಳೂರುಮಂಗಳೂರು: ಪತ್ರಕರ್ತ ಎಂದು ಹೇಳಿಕೊಂಡು ಸಂಚಾರ ಪೊಲೀಸರಿಗೆ ಧಮಕಿ, ವಿಡಿಯೋ ವೈರಲ್: ಪ್ರಕರಣ ದಾಖಲು

ಮಂಗಳೂರು: ಪತ್ರಕರ್ತ ಎಂದು ಹೇಳಿಕೊಂಡು ಸಂಚಾರ ಪೊಲೀಸರಿಗೆ ಧಮಕಿ, ವಿಡಿಯೋ ವೈರಲ್: ಪ್ರಕರಣ ದಾಖಲು

- Advertisement -
- Advertisement -

ಮಂಗಳೂರು: ನಗರದ ಬಂಟ್ಸ್ ಹಾಸ್ಟೆಲ್ ಜಂಕ್ಷನ್‌ನಲ್ಲಿ ಸಂಚಾರ ನಿಯಂತ್ರಣ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯ ಕಾರ್ಯಕ್ಕೆ ಅಡ್ಡಿಪಡಿಸಿ, ತಾನು ಪತ್ರಕರ್ತ ಎಂದು ಹೇಳಿಕೊಂಡು ನಿಂದನಾತ್ಮಕವಾಗಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಅಪರಿಚಿತ ವ್ಯಕ್ತಿಯ ವಿರುದ್ಧ ಮಂಗಳೂರು ಸಂಚಾರ ಪೂರ್ವ (ಕದ್ರಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೆಪ್ಟೆಂಬರ್ 9ರಂದು ಬೆಳಿಗ್ಗೆ ಬಂಟ್ಸ್ ಹಾಸ್ಟೆಲ್ ಬಳಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ, ನಂಬರ್ ಪ್ಲೇಟ್‌ಗೆ ಸ್ಟಿಕ್ಕರ್ ಅಂಟಿಸಿಕೊಂಡು ಬಂದಿದ್ದ ದ್ವಿಚಕ್ರ ವಾಹನವನ್ನು ತಡೆದು ಫೋಟೋ ತೆಗೆಯಲು ಯತ್ನಿಸಿದ್ದರು. ಈ ವೇಳೆ ವಾಹನ ಸವಾರ ತಕರಾರು ತೆಗೆದಿದ್ದು, ಅಷ್ಟರಲ್ಲೇ ಮಧ್ಯಪ್ರವೇಶಿಸಿದ ಅಪರಿಚಿತ ವ್ಯಕ್ತಿಯೊಬ್ಬ ತಾನು ‘ಮೀಡಿಯಾದವನು’ (ಪತ್ರಕರ್ತ) ಎಂದು ಹೇಳಿಕೊಂಡು ಸಿಬ್ಬಂದಿ ವಿರುದ್ಧ ಏರುಧ್ವನಿಯಲ್ಲಿ ಮಾತನಾಡಿದ್ದಾನೆ. “ನಮ್ಮ ಟ್ಯಾಕ್ಸ್‌ನಿಂದ ನೀವು ಬದುಕುವುದು, ನಿಮ್ಮ ವಿಡಿಯೋ ವೈರಲ್ ಮಾಡುತ್ತೇನೆ” ಎಂದು ಹೆದರಿಸಿ ಸುಮಾರು 15 ನಿಮಿಷಗಳ ಕಾಲ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. ಸ್ಥಳಕ್ಕೆ ಮತ್ತಷ್ಟು ಪೊಲೀಸರು ಆಗಮಿಸುತ್ತಿದ್ದಂತೆ ಆರೋಪಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ತರುವಾಯ ಆರೋಪಿಯು ತಾನು ಚಿತ್ರೀಕರಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು, ಪೊಲೀಸ್ ಇಲಾಖೆಯ ವಿರುದ್ಧ ಸಾರ್ವಜನಿಕರಲ್ಲಿ ತಪ್ಪು ಕಲ್ಪನೆ ಮೂಡಿಸುವಂತೆ ಅಪಪ್ರಚಾರ ಮಾಡಿದ್ದಾನೆ. ಸಾರ್ವಜನಿಕ ಸೇವಕರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಇಲಾಖೆಯ ತೇಜೋವಧೆಗೆ ಯತ್ನಿಸಿದ ಆರೋಪದಡಿ ಕದ್ರಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ.

- Advertisement -

Latest News

error: Content is protected !!