
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ನಡೆದಿದ್ದ ಹಳೆಯ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಸೈಬರ್ ಕ್ರೈಮ್ ಪೊಲೀಸರ ಎದುರು ಇತ್ತೀಚೆಗೆ ವಿಚಾರಣೆಗೆ ಹಾಜರಾಗಿದ್ದ ಮಂಗಳೂರು ಮೂಲದ ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾ ವಿದೇಶಕ್ಕೆ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಅಕ್ಟೋಬರ್ 24ರಂದು ನಗರ ಕೇಂದ್ರ ಸೈಬರ್ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರ ಎದುರು ಹಾಜರಾಗಿದ್ದ ಅವರು, ಇದೀಗ ಬಂಧನದ ಭೀತಿಯಿಂದ ಅಮೆರಿಕಕ್ಕೆ ತೆರಳಿರಬಹುದು ಎಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಪೊಲೀಸರು ನೋಟಿಸ್ ಜಾರಿ ಮಾಡುವ ಮೊದಲೇ, ಕೃಪಾ ಆಳ್ವಾ ಅವರು ಸ್ವಯಂಪ್ರೇರಿತವಾಗಿ ಠಾಣೆಗೆ ಹಾಜರಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು. ವಿಚಾರಣೆ ಪೂರ್ಣಗೊಂಡ ಬಳಿಕ “ಮುಂದಿನ ವಿಚಾರಣೆಗೆ ಕಡ್ಡಾಯವಾಗಿ ಹಾಜರಾಗಬೇಕು ಹಾಗೂ ತನಿಖಾಧಿಕಾರಿಗಳ ಅನುಮತಿಯಿಲ್ಲದೆ ಎಲ್ಲಿಯೂ ಹೋಗಬಾರದು” ಎಂದು ಪೊಲೀಸರು ಸೂಚನೆ ನೀಡಿದ್ದರು. ಆದರೆ, ಈ ಸೂಚನೆಯನ್ನು ಮೀರಿ ಅವರು ವಿದೇಶಕ್ಕೆ ತೆರಳಿದ್ದಾರೆ ಎಂದು ಹೇಳಲಾಗಿದೆ.
ವಿಚಾರಣೆ ವೇಳೆ ಕೃಪಾ ಆಳ್ವಾ, “ನನಗೆ ಈ ಸ್ಟಿಂಗ್ ಕಾರ್ಯಾಚರಣೆಗೂ ಯಾವುದೇ ಸಂಬಂಧವಿಲ್ಲ, ನಾನು ಇದರಲ್ಲಿ ಭಾಗಿಯಾಗಿಲ್ಲ. ಮಾಧ್ಯಮ ಸಂಸ್ಥೆಯೊಂದರ ಮುಖ್ಯಸ್ಥ ರಾಕೇಶ್ ಶೆಟ್ಟಿ ಅವರು ಅನಿರೀಕ್ಷಿತವಾಗಿ ವಿಮಾನ ನಿಲ್ದಾಣದಲ್ಲಿ ಸಿಕ್ಕಾಗ ಮಾತನಾಡಿದ್ದೆ ಅಷ್ಟೇ” ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದರು. ಇದೀಗ ಅವರು ತನಿಖೆಗೆ ಸಹಕರಿಸದೆ ವಿದೇಶಕ್ಕೆ ತೆರಳಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.


