Thursday, September 3, 2026
Homeಅಪರಾಧಕಾಲೇಜು ವಿದ್ಯಾರ್ಥಿಗಳ ಮೇಲೆ ಅನೈತಿಕ ಪೊಲೀಸ್‌ಗಿರಿ; ಕಾಂಗ್ರೆಸ್ ಮುಖಂಡ ಸೇರಿ ಮೂವರ ವಿರುದ್ಧ FIR

ಕಾಲೇಜು ವಿದ್ಯಾರ್ಥಿಗಳ ಮೇಲೆ ಅನೈತಿಕ ಪೊಲೀಸ್‌ಗಿರಿ; ಕಾಂಗ್ರೆಸ್ ಮುಖಂಡ ಸೇರಿ ಮೂವರ ವಿರುದ್ಧ FIR

- Advertisement -
- Advertisement -

ಮೂಡುಬಿದಿರೆ: ಇಲ್ಲಿನ ಖಾಸಗಿ ಕಾಲೇಜೊಂದರ ಇಬ್ಬರು ವಿದ್ಯಾರ್ಥಿಗಳು ಮತ್ತು ಇಬ್ಬರು ವಿದ್ಯಾರ್ಥಿನಿಯರು ಸ್ಥಳೀಯ ಬಸ್ ನಿಲ್ದಾಣದ ಬಳಿಯ ಕೆಫೆಯೊಂದಕ್ಕೆ ಉಪಾಹಾರಕ್ಕಾಗಿ ತೆರಳಿದ್ದಾಗ, ಅವರ ಮೇಲೆ ಅನೈತಿಕ ಪೊಲೀಸ್‌ಗಿರಿ ನಡೆಸಿದ ಆರೋಪದ ಮೇಲೆ ಮೂವರ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಅವರ ಆಪ್ತ ಹಾಗೂ ಕಾಂಗ್ರೆಸ್ ಸಾಮಾಜಿಕ ಜಾಲತಾಣ ನಿರ್ವಾಹಕ ರಿತಿಲ್ ಪೂಜಾರಿ, ಆರ್‌ ಎಸ್‌ ಎಸ್ ಕಾರ್ಯಕರ್ತ ಪ್ರೇಮ್ ಭಂಡಾರಿ ಮತ್ತು ಬಜರಂಗದಳದ ಮಾಜಿ ಸಂಚಾಲಕ ಸಂಜಯ್ ಹೆಗ್ಡೆ ‌ ಈ ಪ್ರಕರಣದ ಆರೋಪಿಗಳಾಗಿದ್ದಾರೆ.

ಘಟನೆ ನಡೆದ ಕೆಫೆಗೆ ಅಕ್ರಮವಾಗಿ ನುಗ್ಗಿದ ಆರೋಪಿಗಳು, ಅಲ್ಲಿದ್ದ ವಿದ್ಯಾರ್ಥಿಗಳ ಹೆಸರುಗಳನ್ನು ಕೇಳಿ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ತೀವ್ರ ಬೆದರಿಕೆ ಒಡ್ಡಿದ್ದರೆಂದು ದೂರಲಾಗಿದೆ. ಆರೋಪಿಗಳ ಕೃತ್ಯದಿಂದ ಭಯಬಿದ್ದ ವಿದ್ಯಾರ್ಥಿಗಳು ಆರಂಭದಲ್ಲಿ ದೂರು ನೀಡಲು ಹಿಂಜರಿದಿದ್ದರು. ಆದರೆ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಮೂಡುಬಿದಿರೆ ಪೊಲೀಸ್ ಠಾಣೆಯ ಪಿಎಸ್‌ಐ ಪ್ರತಿಭಾ ಅವರು ಪರಿಸ್ಥಿತಿಯನ್ನು ಪರಿಶೀಲಿಸಿ, ನೀಡಿದ ದೂರಿನ ಆಧಾರದ ಮೇಲೆ ಬಿಎನ್‌ಎಸ್ (BNS)
ಕಲಂ 126(2), 352, 351(2) ಮತ್ತು 3(5) ರ ಅಡಿಯಲ್ಲಿ ಆರೋಪಿಗಳ ವಿರುದ್ಧ ಸ್ವಯಂಪ್ರೇರಿತ (Suo Moto) ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ಪೈಕಿ ಪ್ರೇಮ್ ಭಂಡಾರಿ ಹಾಗೂ ಸಂಜಯ್ ಹೆಗ್ಡೆ ವಿರುದ್ಧ ಈಗಾಗಲೇ ಮೂಡುಬಿದಿರೆ ಠಾಣೆಯೊಂದರಲ್ಲೇ ನಾಲ್ಕು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಅವರ ವಿರುದ್ಧ ರೌಡಿಶೀಟ್ ಕೂಡ ತೆರೆಯಲಾಗಿತ್ತು. ಸದ್ಯಕ್ಕೆ ಈ ಆರೋಪಿಗಳ ರೌಡಿಶೀಟ್‌ಗೆ ಸಂಬಂಧಿಸಿದ ಬಾಂಡ್ ಅವಧಿ ಮುಕ್ತಾಯಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!