ಸುಳ್ಯ: ಸಂಪಾಜೆಯ ಕಡೆಪಾಲದಲ್ಲಿ ನಡೆದಿದ್ದ ಫಾತಿಮಾ ನಿಶಾನ ನಿಗೂಢ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದ ಇಬ್ಬರು ಆರೋಪಿಗಳಿಗೆ ಪುತ್ತೂರಿನ ಐದನೇ ಹೆಚ್ಚುವರಿ ಸತ್ರ ನ್ಯಾಯಾಲಯವು ಶರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.
ಕಳೆದ 2026ರ ಜುಲೈ 18ರ ರಾತ್ರಿ ಫಾತಿಮಾ ನಿಶಾನ ಅವರ ಮೇಲೆ ಮಾವ ಅಲವಿ, ಅತ್ತೆ ಆಯಿಷಾ ಹಾಗೂ ನಾದಿನಿ ಫಸೀಲಾ ಹಿಂಸೆ ನಡೆಸಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಸುಳ್ಯ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸಿ, ಸುಳ್ಯದ ಹಿರಿಯ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ (JMFC) ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಬಳಿಕ ಆರೋಪಿಗಳಾದ ಆಯಿಷಾ ಮತ್ತು ಫಸೀಲಾ ಪರವಾಗಿ ಪುತ್ತೂರು ಐದನೇ ಹೆಚ್ಚುವರಿ ಸತ್ರ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಪೀಠವು, ಇದೀಗ ಆರೋಪಿಗಳಿಗೆ ಶರತ್ತುಬದ್ಧ ಜಾಮೀನು ನೀಡಿ ಅರ್ಜಿಯನ್ನು ಪುರಸ್ಕರಿಸಿದೆ.
ಆರೋಪಿಗಳ ಪರವಾಗಿ ಸುಳ್ಯದ ಹಿರಿಯ ನ್ಯಾಯವಾದಿ ಎಂ. ವೆಂಕಪ್ಪ ಗೌಡ, ಚಂಪಾ ವಿ. ಗೌಡ, ರಾಜೇಶ್ ಬಿ.ಜಿ., ಶ್ಯಾಮ್ ಪ್ರಸಾದ್ ಎನ್. ಕೆ. ಹಾಗೂ ವಿಮಲೇಶ್ ಆರ್. ಗೌಡ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು


