ಮೂಡಬಿದಿರೆ: ಹುಲ್ಲು ಮೇಯಲು ಕಟ್ಟಿಹಾಕಿದ್ದ ದನವನ್ನು ಬಿಡಿಸಿಕೊಂಡು ಬರುತ್ತಿದ್ದ ವೇಳೆ ಆಕಸ್ಮಿಕವಾಗಿ ಹಗ್ಗ ಕಾಲಿಗೆ ಸುತ್ತಿಕೊಂಡು ಬಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನೆಲ್ಲಿಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಂಡುಕಲ್ಲು ಎಂಬಲ್ಲಿ ಭಾನುವಾರ ನಡೆದಿದೆ.
ನಿಟ್ಟೆ ಹಾಳೆಕಟ್ಟೆ ನಿವಾಸಿ ರಘುರಾಮ ಎಂಬುವರ ಪತ್ನಿ ಸೌಮ್ಯಾ (30) ಮೃತಪಟ್ಟ ಮಹಿಳೆ. ನಾಲ್ಕು ದಿನಗಳ ಹಿಂದಷ್ಟೇ ಇವರು ನೆಲ್ಲಿಕಾರಿನಲ್ಲಿರುವ ತಮ್ಮ ತವರು ಮನೆಗೆ ಬಂದಿದ್ದರು.
ತವರ ಮನೆಯ ಸಮೀಪ ಮೇಯಲು ಬಿಟ್ಟಿದ್ದ ದನದ ಹಗ್ಗವನ್ನು ಮಧ್ಯಾಹ್ನದ ವೇಳೆಗೆ ಬಿಚ್ಚಿ ಕರೆದುಕೊಂಡು ಬರಲಾಗುತ್ತಿತ್ತು. ಈ ಸಂದರ್ಭದಲ್ಲಿ ದನವು ದಿಢೀರನೆ ಓಡಲು ಯತ್ನಿಸಿದಾಗ, ಸೌಮ್ಯ ಅವರು ಹಗ್ಗವನ್ನು ಎಳೆದು ಹಿಡಿಯಲು ಪ್ರಯತ್ನಿಸಿದ್ದಾರೆ. ಆಗ ನಿಯಂತ್ರಣ ಸಿಗದೆ ಹಗ್ಗವು ಅವರ ಕಾಲಿಗೆ ಬಿಗಿಯಾಗಿ ಸುತ್ತಿಕೊಂಡು ನೆಲಕ್ಕೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು.
ತಕ್ಷಣವೇ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.


