ನವದೆಹಲಿ; ದಕ್ಷಿಣ ಕನ್ನಡ ಹಾಗೂ ಕರಾವಳಿ ಭಾಗದಲ್ಲಿ ಅಡಿಕೆ ಬೆಳೆಗಾರರನ್ನು ಕಾಡುತ್ತಿರುವ ವಿವಿಧ ರೋಗಗಳ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಲೋಕಸಭೆಯಲ್ಲಿ ಭರವಸೆ ನೀಡಿದ್ದಾರೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಲೋಕಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ, ಕರಾವಳಿ ಪ್ರದೇಶದಲ್ಲಿ ಅಡಿಕೆ ಬೆಳೆಗೆ ತಗುಲುತ್ತಿರುವ ‘ಹಳದಿ ಎಲೆ ರೋಗ’ ಹಾಗೂ ‘ಎಲೆ ಚುಕ್ಕಿ ರೋಗ’ ಸೇರಿದಂತೆ ಇತರ ಮಾರಕ ರೋಗಗಳಿಂದ ಬೆಳೆಗಾರರು ಅನುಭವಿಸುತ್ತಿರುವ ಅಪಾರ ನಷ್ಟ ಹಾಗೂ ಸಂಕಷ್ಟದ ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆದರು.
ಸಂಸದರ ಪ್ರಶ್ನೆಗೆ ಸುದೀರ್ಘವಾಗಿ ಉತ್ತರಿಸಿದ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದರು. ಅಡಿಕೆ ರೋಗಗಳಿಗೆ ವೈಜ್ಞಾನಿಕ ಹಾಗೂ ಶಾಶ್ವತ ಪರಿಹಾರ ಕಂಡುಕೊಳ್ಳಲು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR) ಹಾಗೂ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ (CPCRI) ಮುಂತಾದ ಪ್ರಮುಖ ಸಂಶೋಧನಾ ಕೇಂದ್ರಗಳ ಮೂಲಕ ಅಗತ್ಯ ತಂತ್ರಜ್ಞಾನ, ಮಾರ್ಗದರ್ಶನ ಮತ್ತು ನೆರವನ್ನು ಒದಗಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು. ಕೇಂದ್ರ ಸರ್ಕಾರದ ಈ ಧನಾತ್ಮಕ ಸ್ಪಂದನೆಯಿಂದ ಕರಾವಳಿಯ ಸಾವಿರಾರು ಅಡಿಕೆ ಬೆಳೆಗಾರರಲ್ಲಿ ಹೊಸ ಭರವಸೆ ಮೂಡಿದೆ.


