ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ರೈಲ್ವೇ ಪ್ರಯಾಣಿಕರ ದಶಕಗಳ ಕಾಲದ ಸುದೀರ್ಘ ಬೇಡಿಕೆಯೊಂದು ಕೊನೆಗೂ ಈಡೇರಿದೆ. ಮಂಗಳೂರು ವ್ಯಾಪ್ತಿಯ ಪ್ರಮುಖ ರೈಲು ನಿಲ್ದಾಣಗಳನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ನೈರುತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಿ ರೈಲ್ವೇ ಮಂಡಳಿ ಆದೇಶ ಹೊರಡಿಸಿದೆ.
ಈ ಹಿಂದೆ ಮಂಗಳೂರಿನ ಪ್ರಮುಖ ರೈಲು ನಿಲ್ದಾಣಗಳು ಕೇರಳದ ಪಾಲಕ್ಕಾಡ್ ವಿಭಾಗದ ಆಡಳಿತ ವ್ಯಾಪ್ತಿಗೆ ಒಳಪಟ್ಟಿದ್ದವು. ಈ ಆಡಳಿತಾತ್ಮಕ ತೊಡಕಿನಿಂದಾಗಿ ಕರಾವಳಿ ಭಾಗದ ರೈಲ್ವೇ ಅಭಿವೃದ್ಧಿ ಹಾಗೂ ಹೊಸ ರೈಲು ಸೇವೆಗಳ ವಿಸ್ತರಣೆಗೆ ಹಿನ್ನಡೆಯಾಗುತ್ತಿತ್ತು.ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಅಧಿಕಾರ ಸ್ವೀಕರಿಸಿದಾಗಿನಿಂದಲೂ ಈ ವಿಷಯವನ್ನು ಆದ್ಯತೆಯಾಗಿ ತೆಗೆದುಕೊಂಡು, ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಮಂಡಳಿಯ ಹಿರಿಯ ಅಧಿಕಾರಿಗಳೊಂದಿಗೆ ನಿರಂತರವಾಗಿ ಚರ್ಚೆ ನಡೆಸಿದ್ದರು. ಅವರ ಈ ಸತತ ಪ್ರಯತ್ನದ ಫಲವಾಗಿ ಇದೀಗ ಆಡಳಿತಾತ್ಮಕ ವಿಲೀನ ಸಾಧ್ಯವಾಗಿದ್ದು, ಪ್ರದೇಶದ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಪ್ರಯಾಣಿಕರ ಅಹವಾಲುಗಳ ಶೀಘ್ರ ಪರಿಹಾರಕ್ಕೆ ಹಾದಿ ಸುಗಮವಾಗಿದೆ.


