
ಚೆನ್ನೈ; ಅತಿಯಾದ ಮೊಬೈಲ್ ಫೋನ್ ಬಳಕೆ ಹಾಗೂ ಗಂಟೆಗಟ್ಟಲೆ ಗೇಮ್ಸ್ ಮತ್ತು ವಿಡಿಯೋಗಳನ್ನು ನೋಡುತ್ತಿದ್ದ ಪರಿಣಾಮ ಹಿರಿಯ ನಟಿ ಶಕೀಲಾ ಅವರು ತೀವ್ರ ಕುತ್ತಿಗೆ ನೋವಿಗೆ ತುತ್ತಾಗಿದ್ದು, ಇತ್ತೀಚೆಗೆ ₹3 ಲಕ್ಷ ವೆಚ್ಚದಲ್ಲಿ ಕುತ್ತಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಆಸ್ಪತ್ರೆಯಿಂದ ಚೇತರಿಸಿಕೊಂಡು ಮನೆಗೆ ಮರಳಿದ ಬಳಿಕ ವಿಡಿಯೋ ಒಂದನ್ನು ಹಂಚಿಕೊಂಡಿರುವ ಅವರು, ಕುತ್ತಿಗೆಗೆ ‘ನೆಕ್ ಕಾಲರ್’ ಧರಿಸಿ ತಮ್ಮ ಅನಾರೋಗ್ಯದ ಕುರಿತು ವಿವರಣೆ ನೀಡಿದ್ದಾರೆ.
“ಫೋನ್ನಲ್ಲಿ ಯೂಟ್ಯೂಬ್, ಇನ್ಸ್ಟಾಗ್ರಾಮ್ ರೀಲ್ಸ್ ನೋಡುವುದು ಹಾಗೂ ನಿರಂತರವಾಗಿ 4 ಗಂಟೆಗಳ ಕಾಲ ಆಟಗಳನ್ನು ಆಡುವುದು ನನ್ನ ಅಭ್ಯಾಸವಾಗಿತ್ತು. ಒಂದು ಪಕ್ಕಕ್ಕೆ ಮಲಗಿ ಗಂಟೆಗಟ್ಟಲೆ ಫೋನ್ ಬಳಸುತ್ತಿದ್ದೆ. ಈ ತಪ್ಪಾದ ಭಂಗಿ ಹಾಗೂ ಸುದೀರ್ಘ ಬಳಕೆಯು ನನ್ನ ಕುತ್ತಿಗೆಯ ರಕ್ತನಾಳಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಹೀಗಾಗಿ ದೊಡ್ಡ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಾಯಿತು” ಎಂದು ಶಕೀಲಾ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಶಸ್ತ್ರಚಿಕಿತ್ಸೆಯ ನಂತರ ದೈನಂದಿನ ಸಣ್ಣಪುಟ್ಟ ಕೆಲಸಗಳಿಗೂ ಇತರರ ಸಹಾಯ ಬೇಕಾಗಿದೆ ಎಂದಿರುವ ಅವರು, “ಫೋನ್ ಅತ್ಯಂತ ಉಪಯುಕ್ತ ವಸ್ತು ನಿಜ, ಆದರೆ ಅದನ್ನು ಅಗತ್ಯಕ್ಕೆ ತಕ್ಕಷ್ಟು ಮಾತ್ರ ಬಳಸಿ. ಅನಗತ್ಯ ವಿಡಿಯೋಗಳನ್ನು ನೋಡಿ ಸಮಯ ಹಾಳುಮಾಡಿಕೊಳ್ಳಬೇಡಿ. ಇಲ್ಲದಿದ್ದರೆ ಲಕ್ಷಾಂತರ ರೂಪಾಯಿ ಕಳೆದುಕೊಳ್ಳುವುದರ ಜೊತೆಗೆ ಅಸಹನೀಯ ನೋವನ್ನು ಅನುಭವಿಸಬೇಕಾಗುತ್ತದೆ. ಮುಖ್ಯವಾಗಿ ಮಕ್ಕಳಿಗೆ ಗ್ಯಾಜೆಟ್ಗಳನ್ನು ನೀಡುವಾಗ ಪೋಷಕರು ಜಾಗರೂಕರಾಗಿರಬೇಕು” ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.


